ಸಾರಾಂಶ
ಚಿಕ್ಕಮಗಳೂರು: ನವರಾತ್ರಿ ಕೊನೆಯ ದಿನವಾದ ವಿಜಯದಶಮಿ ಅಂಗವಾಗಿ ಶ್ರೀ ಕಾಳಿಕಾಂಬ ಸೇವಾ ಸಮಿತಿ ವತಿಯಿಂದ ಶನಿವಾರ ರಾಮನಹಳ್ಳಿ ಸಮೀಪದ ರತ್ನಗಿರಿ ಬೋರೆಯಲ್ಲಿ ಶ್ರೀ ಕಾಳಿಕಾಂಬ ದೇವಿಯ 32ನೇ ವರ್ಷದ ಶರವನ್ನರಾತ್ರಿ ಪೂಜಾ ಮಹೋತ್ಸವ ವಿಶೇಷ ಪೂಜೆ ಹಾಗೂ ವಿವಿಧ ಹೋಮ ನೆರವೇರಿಸಿ ಆಚರಿಸಲಾಯಿತು. ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ, ದೇವತಾ ಪ್ರಾರ್ಥನೆ, ಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ವೃತ್ತಿಗ್ರಹಣ, ಕಳಸ ಸ್ಥಾಪನೆ, ವಿವಿಧ ಹೋಮಗಳು ಜರುಗಿದವು. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಅಷ್ಟಾವದಾನ ಸೇವೆ, ಶಮಿಪೂಜೆ, ಪುಷ್ಪಾಲಂಕೃತ ಉಯ್ಯಾಲೆ ಉತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಪೂಜಾ ವಿಧಿವಿಧಾನ ಕೈಂಕರ್ಯಗಳನ್ನು ಪುರೋಹಿತ ಅರುಣ್‌ಶರ್ಮ ಮತ್ತು ಪೂರ್ವಾಚಾರ್ ಇವರ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.ಈ ವೇಳೆ ಮಾತನಾಡಿ ಶ್ರೀ ಕಾಳಿಕಾಂಬ ಸೇವಾ ಸಮಿತಿ ಅಧ್ಯಕ್ಷ ಬಿ.ಚಂದ್ರಶೇಖರ್, ವಿಜಯದಶಮಿ ಹಬ್ಬವು ಒಳ್ಳೆತನ ಮತ್ತು ಸದ್ಗುಣಗಳ ಹಾದಿಯಲ್ಲಿ ಸಾಗಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ತರಲಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಆರ್.ಭೀಷ್ಮಾಚಾರ್, ಉಪಾಧ್ಯಕ್ಷ ಬಿ.ಜಗದೀಶ್, ರುದ್ರಯ್ಯಾಚಾರ್, ಕಾರ್ಯದರ್ಶಿ ಎಂ.ಕೆ.ಉಮೇಶ್, ಸಹ ಕಾರ್ಯದರ್ಶಿ ಆರ್.ದಕ್ಷಿಣಾಮೂರ್ತಿ, ಖಜಾಂಚಿ ಸಿ.ಎಸ್.ಅರುಣ್, ನಿರ್ದೇಶಕರುಗಳಾದ ಹೆಚ್.ಆರ್.ಉಮಾಶಂಕರ್, ಬಿ.ಪಿ.ರತೀಶ್, ಸಿ.ಆರ್.ಗಂಗಾಧರ್, ಎಂ.ಜೆ.ಚಂದ್ರಶೇಖರ್, ಸಿ.ಜೆ.ಬಾಲಕೃಷ್ಣ, ಕೆ.ಬಿ.ಅಶೋಕಚಾರ್, ಮಲ್ಲಿಕಾರ್ಜುನ್, ಕೆ.ಕೆ.ಧರ್ಮಾಚಾರ್ ಮತ್ತಿತರರಿದ್ದರು.