ಶರ್ಮಾ ಹೋರಾಟದ ಬದುಕು ಪ್ರತಿಯೊಬ್ಬರಿಗೆ ಸ್ಫೂರ್ತಿ

| Published : Oct 01 2025, 01:00 AM IST

ಶರ್ಮಾ ಹೋರಾಟದ ಬದುಕು ಪ್ರತಿಯೊಬ್ಬರಿಗೆ ಸ್ಫೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಹೊರಗುತ್ತಿಗೆ ಪದ್ಧತಿಯನ್ನು ಚಾಲ್ತಿಗೆ ತಂದಿವೆ. ಯಾವುದೇ ಸಾಮಾಜಿಕ ಭದ್ರತೆ ಇಲ್ಲದೆ ಹೊರಗುತ್ತಿಗೆ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ. ಡಾ. ಶರ್ಮಾ ಅವರು ತಮ್ಮ ಹೋರಾಟದ ಅನುಭವದ ಮೂಲಕ ಹೊರಗುತ್ತಿಗೆ ನೌಕರರಿಗೆ ಸಾಮಾಜಿಕ ಭದ್ರತೆ, ನ್ಯಾಯ ಒದಗಿಸಲು ಮುಂದಾಗಬೇಕು.

ಹುಬ್ಬಳ್ಳಿ:ಡಾ. ಕೆ.ಎಸ್. ಶರ್ಮಾ ಅವರ ಹೋರಾಟದ ಬದುಕು ಪ್ರತಿಯೊಬ್ಬರ ಜೀವನಕ್ಕೂ ಸೂರ್ತಿಯಾಗಿದೆ. ಅವರು ಹೋರಾಟದ ಮೂಲಕ ಜಗತ್ತಿಗೇ ಚಿರಪರಿಚಿತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದ ಜಗದೀಶ ಶೆಟ್ಟರ್ ಶ್ಲಾಘಿಸಿದರು.

ಬಸವೇಶ್ವರ ನಗರದ ವಿಶ್ವಶ್ರಮಚೇತನದಲ್ಲಿ ಮಂಗಳವಾರ ಡಾ. ಕೆ.ಎಸ್.ಶರ್ಮಾ ಅವರ ೯೨ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದ ಅವರು, ಶರ್ಮಾ ಅವರಿಗೆ ಈ 92ರ ಇಳಿ ವಯಸ್ಸಿನಲ್ಲಿಯೂ ಹೋರಾಟದ ಕಿಚ್ಚು ಆರಿಲ್ಲ. ಅವರ ವ್ಯಕ್ತಿತ್ವ ಎಲ್ಲ ಪ್ರಶಸ್ತಿಗಳನ್ನು ಮೀರಿದ್ದಾಗಿದೆ ಎಂದರು.ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಹೊರಗುತ್ತಿಗೆ ಪದ್ಧತಿಯನ್ನು ಚಾಲ್ತಿಗೆ ತಂದಿವೆ. ಯಾವುದೇ ಸಾಮಾಜಿಕ ಭದ್ರತೆ ಇಲ್ಲದೆ ಹೊರಗುತ್ತಿಗೆ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ. ಡಾ. ಶರ್ಮಾ ಅವರು ತಮ್ಮ ಹೋರಾಟದ ಅನುಭವದ ಮೂಲಕ ಹೊರಗುತ್ತಿಗೆ ನೌಕರರಿಗೆ ಸಾಮಾಜಿಕ ಭದ್ರತೆ, ನ್ಯಾಯ ಒದಗಿಸಲು ಮುಂದಾಗಬೇಕು. ಶರ್ಮಾ ಅವರು ೨೩ ಸಾವಿರ ದಿನಗೂಲಿ ನೌಕರರನ್ನು ಕಾಯಂಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅವರ ಮಾರ್ಗದರ್ಶನಲ್ಲಿ ಕಾಯಂಗೊಳಿಸುವ ಭಾಗ್ಯ ಸಿಎಂ ಆಗಿ ನನಗೆ ಸಿಕ್ಕಿತ್ತು ಎಂದು ಸ್ಮರಿಸಿದರು.

ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು, ಡಾ.ಶರ್ಮಾ ಹಲವು ಹೋರಾಟಗಳನ್ನು ಹುಟ್ಟುಹಾಕಿ, ನಮ್ಮಂಥ ಅನೇಕ ಹೋರಾಟಗಾರರಿಗೆ ಪ್ರೇರಣೆಯಾದವರು. ಅಂದು ನಮಗೆಲ್ಲ ಧಾರವಾಡದ ಕಡಪಾ ಮೈದಾನ ಹೋರಾಟದ ವೇದಿಕೆಯಾಗಿತ್ತು. ಅದಕ್ಕೆ ಶರ್ಮಾ ಅವರ ನೇತೃತ್ವ ಇತ್ತು. ಬರೀ ದಿನಗೂಲಿಗಳ ಪರವಾಗಿ ಮಾತ್ರ ಹೋರಾಡಲಿಲ್ಲ, ಗಡಿ ಸೇರಿದಂತೆ ಹತ್ತು ಹಲವು ಸಮಸ್ಮೆಗಳನ್ನು ಕೈಗೆತ್ತಿಕೊಂಡು ಹೋರಾಡುತ್ತ ಬಂದಿದ್ದಾರೆ ಎಂದು ಸ್ಮರಿಸಿದರು.

ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಅವರು, ಡಾ.ಶರ್ಮಾ ಬರೀ ಮಾರ್ಕವಾದಿ ಅಷ್ಟೇ ಅಲ್ಲ, ಗಾಂಧಿವಾದಿ ಮತ್ತು ಅಂಬೇಡ್ಕರ್‌ ವಾದಿಯೂ ಹೌದು. ಹಾಗಾಗಿ ನೊಂದವರ ನೋವು, ಅಶಕ್ತರ ನಿಟ್ಟುಸಿರು, ಅಮಾಯಕರ ಭಾವನೆಗಳು ಅವರಿಗೆ ಅರ್ಥವಾಗುತ್ತೆ. ಹಾಗಾಗಿ ನಿರತರ ಅವರು ಹೋರಾಟದ ಹಾದಿಯಲ್ಲಿ ಇರತ್ತಾರೆ ಎಂದು ಬನ್ನಿಸಿದರು.

ಹಿಂದೆ ಹಲವು ಚಳವಳಿಗಳು ಚಮಾವಣೆಯಲ್ಲಿದ್ದವು. ಹಲವು ಕಾರ್ಮಿಕ ನಾಯಕರು ಜನತೆಯನ್ನು ಸಂಘಟಿಸಿ ಸರ್ಕಾರಗಳ ವಿರುದ್ಧ ಹೋರಾಡುತ್ತಿದ್ದರು. ಈಗ ಸಮಸ್ಯೆಗಳು ಇವೆ ಹೋರಾಟ ಮತ್ತು ಹೋರಾಟಗಾರರು ಇಲ್ಲವಾಗಿದ್ದಾರೆ. ಶರ್ಮಾ ಅವರಂತ ದಿಟ್ಟ ಹೋರಾಟಗಾರ ಹುಟ್ಟಿ ಬರಬೇಕಿದೆ. ಆ ಎಲ್ಲ ನೋವಿಗೆ ಮುಲಾಮು ಹುಡುಕಬೇಕಿದೆ ಎಂದು ನ್ಯಾಯವಾದಿ ಕಾತರಕಿ ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಭಾರತ ಏಕತಾ ಆಂದೋಲನ, ಬಸವ ಶಾಂತಿ ಮಿಷನ್ ಪರವಾಗಿ ಡಾ.ಕೆ.ಎಸ್‌.ಶರ್ಮಾ ಅವರಿಗೆ "ಶ್ರಮಜೀವಿಗಳ ರತ್ನ " ಪ್ರಶಸ್ತಿ ಪ್ರದಾನ ಮಾಡಿದ ಮಹಾದೇವ ಹೊರಟ್ಟಿ ಅವರು, ಶ್ರಮಿಕರು, ದಿನಗೂಲಿ ನೌಕರರ ಸಲುವಾಗಿ ದುಡಿದ ಹಾಗೂ ಹೋರಾಟ ಮಾಡಿದ ವ್ಯಕ್ತಿ ಕೆ.ಎಸ್. ಶರ್ಮಾ ಅವರು ದೇಶದ ಎಲ್ಲ ಜನರಿಗೆ ಗೊತ್ತು. ಅವರಿಗೆ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಬೇಕು. ಈ ನಿಟ್ಟಿನಲ್ಲಿ ಸಂಸದ ಜಗದೀಶ ಶೆಟ್ಟರ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದರು.

ಹಿರಿಯ ಸಾಹಿತಿ ರಂಜಾನ್‌ ದರ್ಗಾ ಅವರು, ಈ ನೆಲದಲ್ಲಿ ದುಡಿಯುವ ಜನರ ಪರಂಪರೆ ಇದೆ. ಹಾಗಾಗಿ ಹೋರಾಟ ಈ ಮಣ್ಣಿನ ಗುಣ. ಇಂಥ ಗುಣದ ಡಾ. ಶರ್ಮಾ ಅವರಿಂದ ಸಾವಿರ ಸಾವಿರ ದಿನಗೂಲಿ ಕಾರ್ಮಿಕರಿಗೆ ಬದುಕು ಲಭಿಸಿತು ಎಂದರು.

ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಡಾ.ಶರ್ಮಾ ಅವರು ಹೋರಾಟಗಾರರು ಹೇಗೋ ಹಾಗೆ ನೇರ, ನಿಷ್ಟುರ ಪತ್ರಕರ್ತರೂ ಹೌದು. ಹಾಗಾಗಿ ಎಲ್ಲ ರಾಜಕೀಯ ಪಕ್ಷಗಳು ಇವರಿಂದ ದೂರ ಇವೆ ಎಂದರು.

ಇದೇ ಸಂದರ್ಭದಲ್ಲಿ ಭಾರತ ಏಕತಾ ಆಂದೋಲನ, ಬಸವ ಶಾಂತಿ ಮಿಷನ್ ಪರವಾಗಿ ಡಾ.ಕೆ.ಎಸ್‌.ಶರ್ಮಾ ಅವರಿಗೆ "ಶ್ರಮಜೀವಿಗಳ ರತ್ನ " ಪ್ರಶಸ್ತಿ ಪ್ರದಾನ ಮಾಡಿದ ಮಹಾದೇವ ಹೊರಟ್ಟಿ ಅವರು, ಶ್ರಮಿಕರು, ದಿನಗೂಲಿ ನೌಕರರ ಸಲುವಾಗಿ ದುಡಿದ ಹಾಗೂ ಹೋರಾಟ ಮಾಡಿದ ವ್ಯಕ್ತಿ ಕೆ.ಎಸ್. ಶರ್ಮಾ ಅವರು ದೇಶದ ಎಲ್ಲ ಜನರಿಗೆ ಗೊತ್ತು. ಅವರಿಗೆ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಬೇಕು. ಈ ನಿಟ್ಟಿನಲ್ಲಿ ಸಂಸದ ಜಗದೀಶ ಶೆಟ್ಟರ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದರು.

ಜನ್ಮದಿನದ ಅಂಗವಾಗಿ ‘ಬೆಳಗೊಳಗಣ ಮಹಾಬೆಳಗು’ ಎಂಬ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು.

ಮಾಜಿ ಸಂಸದ ಐ.ಜಿ. ಸನದಿ, ಡಾ.ಎಂ.ಬಾಪೂಜಿ, ಡಾ. ಶ್ರೀನಿವಾಸ ಬನ್ನಿಗೋಳ, ಸುಮಿತ್ರಾ ಪೋತ್ನೀಸ್‌, ಸುಲೋಚನಾ ಪೋತ್ನೀಸ್‌ ಇದ್ದರು.