ಸಾರಾಂಶ
ಕನ್ನಡಪ್ರಭವಾರ್ತೆ ಪುತ್ತೂರು
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ, ಆಶ್ಲೇಷ ಪೂಜೆ, ನಾಗತಂಬಿಲ ಸೇವೆಗಳು ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.ಷಷ್ಠಿ ಮಹೋತ್ಸವದ ಅಂಗವಾಗಿ ಪಂಚಮಿ ದಿನವಾದ ಶುಕ್ರವಾರ ರಾತ್ರಿ ದೇವರ ಬಲಿ ಹೊರಟು ಚಂಡೆ ಬಲಿ, ಬ್ಯಾಂಡ್ ವಾದ್ಯ ಬಲಿ, ಪಲ್ಲಕ್ಕಿ ಉತ್ಸವ, ಭಜನೆ ಬಲಿ, ಕಟ್ಟೆ ಪೂಜೆ, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಬಳಿಕ ಶ್ರೀರಾಮ ಭಜನಾ ಮಂದಿರದಲ್ಲಿ ವಿವಿಧ ಭಜನಾ ಮಂದಿರದ ಭಜಕರಿಂದ ಭಜನ ಕಾರ್ಯಕ್ರಮ ನಡೆಯಿತು. ಬಳಿಕ ಮಂದಿರದಲ್ಲಿ ದೇವರ ಕಟ್ಟೆಪೂಜೆ ನಡೆಯಿತು.ಶನಿವಾರ ಬೆಳಗ್ಗೆ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ದೇವರ ಪಲ್ಲಕಿ ಉತ್ಸವ, ದರ್ಶನ ಬಲಿ ನಡೆದು ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ ನಡೆಯಿತು. ನಂತರ ಕೆಮ್ಮಿಂಜೆ ಗ್ರಾಮ ದೈವ ಶಿರಾಡಿ ದೈವದ ಕಿರುವಾಳು ಬೀಳ್ಕೊಡುಗೆ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಷಷ್ಠಿ ಮಹೋತ್ಸವದಲ್ಲಿ ವಿಶೇಷವಾಗಿ ಷಷ್ಠಿ ವೃತಧಾರಿಗಳಿಗೆ ಮಧ್ಯಾಹ್ನ ಅನ್ನದಾನವು ಸಾಂಪ್ರದಾಯಿಕವಾಗಿ ವ್ಯವಸ್ಥಿತ ರೀತಿಯಲ್ಲಿ ಕಲ್ಪಿಸಲಾಗಿತ್ತು. ಸಂಜೆ ದೈವಗಳ ಭಂಡಾರ ತೆಗೆದು ರಂಗಪೂಜೆ ವೈದಿಕ ಮಂತ್ರಾಕ್ಷತೆ ಹಾಗೂ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಿತು. ಅನ್ನಸಂತರ್ಪಣೆಯಲ್ಲಿ ೧೦ ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಸುಲೋಚನಾ ಪಿ.ಕೆ., ಉತ್ಸವ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತಿತರ ಭಕ್ತಾದಿಗಳು ಉಪಸ್ಥಿತರಿದ್ದರು.