ಸಾರಾಂಶ
ಶಿಗ್ಗಾಂವಿ ಉಪಚುನಾವಣೆಯ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಸವಣೂರಿನಲ್ಲಿ ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾವೇಶ ಕೈ ಕಾರ್ಯಕರ್ತರ ಜೋಶ್ ಹೆಚ್ಚಿಸುವಂತೆ ಮಾಡಿತು.
ನಾರಾಯಣ ಹೆಗಡೆ
ಹಾವೇರಿ : ಶಿಗ್ಗಾಂವಿ ಉಪಚುನಾವಣೆಯ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಸವಣೂರಿನಲ್ಲಿ ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾವೇಶ ಕೈ ಕಾರ್ಯಕರ್ತರ ಜೋಶ್ ಹೆಚ್ಚಿಸುವಂತೆ ಮಾಡಿತು. ಅಲ್ಲದೇ ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡಿದ ಹುಮ್ಮಸ್ಸು ಸಮಾವೇಶದುದ್ದಕ್ಕೂ ಕೈ ನಾಯಕರಲ್ಲಿ ಕಂಡುಬಂತು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಯಾಸೀರ್‌ಖಾನ್ ಪಠಾಣ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸವಣೂರು ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾವೇಶ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ ಜಾರಕಿಹೊಳಿ, ಜಮೀರ್ ಅಹಮದ್, ಶಿವಾನಂದ ಪಾಟೀಲ ಸೇರಿದಂತೆ ಕೈ ನಾಯಕರ ದಂಡೇ ಪಾಲ್ಗೊಂಡಿರುವುದು ಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾರ್ಯಕರ್ತರ ಜೋಶ್ ಹೆಚ್ಚಿಸುವಂತೆ ಮಾಡಿತು. 30 ವರ್ಷಗಳಿಂದ ಚುನಾವಣೆಯಲ್ಲಿ ಸೋಲನ್ನೇ ನೋಡುತ್ತ ಬಂದಿದ್ದ ಕೈ ಕಾರ್ಯಕರ್ತರು ಗೆಲುವಿನ ಉಡುಗೊರೆ ನೀಡಿದ ಪಕ್ಷದ ನಾಯಕರನ್ನು ನೋಡಲು ತಂಡೋಪತಂಡವಾಗಿ ಆಗಮಿಸಿದ್ದರು.
ಶಕ್ತಿ ಪ್ರದರ್ಶನ: ಚುನಾವಣೆ ಸಂದರ್ಭದಲ್ಲಿ ಯೋಜಿತ ರೀತಿಯಲ್ಲಿ ಸಂಘಟಿತ ಪ್ರಚಾರ ನಡೆಸಿದ್ದರು. ಇದರ ಫಲವಾಗಿ ರಾಜ್ಯದ ಮೂರು ಕ್ಷೇತ್ರಗಳನ್ನು ಗೆದ್ದು ಹುಮ್ಮಸ್ಸಿನಲ್ಲಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರು ಹಾಗೂ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದರು. ಜತೆಗೆ, ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಕೈ ಶಕ್ತಿ ಪ್ರದರ್ಶನಕ್ಕೆ ಸಮಾವೇಶ ಸಾಕ್ಷಿಯಾಯಿತು. ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ಸಾರಿ ಹೇಳುವ ಮೂಲಕ ಮತದಾರರಲ್ಲಿದ್ದ ಸಂದೇಹ ನಿವಾರಿಸುವ ಪ್ರಯತ್ನ ಮಾಡಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೈಹಿಡಿದ ಸವಣೂರಿನಲ್ಲೇ ಸಮಾವೇಶ ಹಮ್ಮಿಕೊಂಡಿದ್ದು ಮತದಾರರ ಉತ್ಸಾಹ ಹೆಚ್ಚಿಸುವಂತೆ ಮಾಡಿತು. ಸವಣೂರು ಪಟ್ಟಣ ಹಾಗೂ ಆ ಭಾಗದ ಕೆಲ ಬೂತ್‌ಗಳಲ್ಲಿ ಕಾಂಗ್ರೆಸ್ ಭಾರಿ ಲೀಡ್ ಪಡೆದಿತ್ತು. ಆದ್ದರಿಂದ ಅಲ್ಲಿಯೇ ಕೃತಜ್ಞತಾ ಸಮಾವೇಶ ಆಯೋಜಿಸಿದ್ದು ಕಾರ್ಯಕರ್ತರ ಉತ್ಸಾಹ ಮೇರೆ ಮೀರಿತ್ತು. ಮಧ್ಯಾಹ್ನದಿಂದಲೇ ಕಾರ್ಯಕರ್ತರು ವಿವಿಧ ವಾಹನಗಳನ್ನು ಮಾಡಿಕೊಂಡು ತಂಡೋಪತಂಡವಾಗಿ ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಅವರ ಪರ ಘೋಷಣೆ ಮುಗಿಲು ಮುಟ್ಟಿತ್ತು. ಜಮೀರ್ ಅಹಮದ್ ಪರವಾಗಿಯೂ ಜೈಕಾರ ಕೇಳಿಬಂದವು. ವಕ್ಫ್ ಗೊಂದಲ, ಮುಡಾ ಹಗರಣದಿಂದ ಪಕ್ಷದ ವರ್ಚಸ್ಸಿಗೆ ಯಾವ ಧಕ್ಕೆಯೂ ಆಗಿಲ್ಲ ಎಂಬ ಸಂದೇಶವನ್ನು ಸಮಾವೇಶದ ಮೂಲಕ ರವಾನಿಸುವಲ್ಲಿ ಕೈ ನಾಯಕರು ಯಶಸ್ವಿಯಾದರು.