ಮಂಗಳೂರು: ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರುವ ಸಂದೀಪ್ ಬೆದ್ರ ನಿರ್ದೇಶನದ ‘ಪಿಚ್ಚರ್’ ಸಿನಿಮಾದ ಶುಕ್ರವಾರ ಮಂಗಳೂರಿನ ಭಾರತ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ತೆರೆ ಕಂಡಿತು.

ಸಿನಿಮಾಗೆ ಚಾಲನೆ ನೀಡಿ ಮಾತನಾಡಿದ ಖ್ಯಾತ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಕರಾವಳಿ ಜಿಲ್ಲೆಯಿಂದ ಬಹಳಷ್ಟು ಕಲಾವಿದರು ಸ್ಯಾಂಡಲ್‌ವುಡ್‌ಗೆ ಹೋಗಿದ್ದಾರೆ. ನಿರ್ಮಾಪಕಿ ಶಿಲ್ಪಾ ಗಣೇಶ್ ಈ ಜಿಲ್ಲೆಯವರಾಗಿದ್ದು, ತುಳು ಸಿನಿಮಾ ಮಾಡುವ ಮೂಲಕ ಈ ಮಣ್ಣಿನ ಋಣ ತೀರಿಸುವ ಕೆಲಸ ಮಾಡಿದ್ದಾರೆ. ತುಳು ರಂಗಭೂಮಿಯ ಬಹಳಷ್ಟು ಕಲಾವಿದರಿಗೆ ಅವಕಾಶ ನೀಡಿದ್ದಾರೆ. ನಿತ್ಯ ಪ್ರಕಾಶ್ ಎಂಬ ಪ್ರತಿಭಾವಂತನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ಎಂದರು.

ಖ್ಯಾತ ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್ ಮಾತನಾಡಿ, ನಿರ್ಮಾಪಕಿ ಶಿಲ್ಪಾ ಗಣೇಶ್ ತುಳು ಚಿತ್ರರಂಗಕ್ಕೆ ಶಕ್ತಿಯಾಗಿ ಕೆಲಸ ಮಾಡಿದ್ದಾರೆ. ಕಿರಿಯರ ಜೊತೆಗೆ ಹಿರಿಯ ಕಲಾವಿದರಿಗೂ ಅವಕಾಶ ನೀಡಿದ್ದಾರೆ. ನಿತ್ಯ ಪ್ರಕಾಶನ ಮೊದಲ ಸಿನಿಮಾ ಪ್ರಕಾಶಮಾನವಾಗಲಿ ಎಂದರು.

ತುಳು ಸಿನಿಮಾರಂಗದಲ್ಲಿ ಪ್ರಥಮ ಬಾರಿಗೆ ಸಿನಿಮಾ ನಿರ್ಮಿಸಿದ್ದೇನೆ. ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿ ಎಲ್ಲರಿಂದಲೂ ದೊಡ್ಡ ಮಟ್ಟದ ಪ್ರೋತ್ಸಾಹ ದೊರೆತಿದೆ, ಪ್ರೀಮಿಯರ್ ಶೋಗಳಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಶಿಲ್ಪಾ ಗಣೇಶ್ ತಿಳಿಸಿದರು.

ಸಮಾರಂಭದಲ್ಲಿ ಕಲಾವಿದರಾದ ಭೋಜರಾಜ್ ವಾಮಂಜೂರು, ಶರ್ಮಿಳಾ ಡಿ ಕಾಪಿಕಾಡ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಪುಷ್ಪರಾಜ್ ಬೊಳ್ಳಾರ್, ನಾಯಕ ನಟ ನಿತ್ಯ ಪ್ರಕಾಶ್, ನಾಯಕಿ ನಟಿ ಅಮೃತ ಸದು, ನಿರ್ದೇಶಕ ಸಂದೀಪ್ ಬೆದ್ರ ಇದ್ದರು. ಅನುರಾಗ್ ನಿರ್ವಹಿಸಿದರು.


‘ಪಿಚ್ಚರ್’ ಸಿನಿಮಾ ಮಂಗಳೂರು ಉಡುಪಿ, ಮಣಿಪಾಲ, ಕುಂದಾಪುರ, ಸುರತ್ಕಲ್, ಪಡುಬಿದ್ರೆ, ಕಾರ್ಕಳ, ಪುತ್ತೂರು, ಬೆಳ್ತಂಗಡಿ, ದೇರಳಕಟ್ಟೆ, ಸುಳ್ಯ ಮೊದಲಾದ ಕಡೆಗಳಲ್ಲಿ ತೆರೆಕಂಡಿದೆ.