ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಐತಿಹಾಸಿಕ ಶ್ರೀ ಕೋಟೆ ಮಾರಿಕಾಂಬ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಹಬ್ಬದ ಸಿದ್ಧತೆ ಭರದಿಂದ ಸಾಗಿವೆ. ಈಗಾಗಲೇ ನಗರದಲ್ಲಿ ಜಾತ್ರೆ ಕಟೌಟ್‌ಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ದೀಪಾಲಂಕಾರದಿಂದ ನಗರ ಕಂಗೊಳಿಸುತ್ತಿದೆ.ಈ ಬಾರಿ ಹಬ್ಬದ ಸಂಭ್ರಮ ಹೆಚ್ಚಿಸಲು ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರು ಹೂವಿನ ಅಲಂಕಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈಗಾಗಲೇ ಅಲಂಕಾರ ಮಾಡಲೆಂದೇ ಬೆಂಗಳೂರಿನಿಂದ ಸುಮಾರು 40ಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಸ್ಥಳೀಯರ ಜೊತೆಗೂಡಿ ದೇವಸ್ಥಾನ ಮತ್ತು ಗಾಂಧಿ ಬಜಾರ್ ಗಳಲ್ಲಿ ಹೂವಿನ ಅಲಂಕಾರ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ. ಹೂವು, ಕುಂಕುಮದ ಪ್ಯಾಕೇಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಸುಮಾರು ₹20 ಲಕ್ಷ ವೆಚ್ಚದಲ್ಲಿ ಈ ಕಾರ್ಯ ನಡೆಯುತ್ತಿದೆ.
ದೇವಸ್ಥಾನ ಸಮಿತಿಯವರು ಈಗಾಗಲೇ ಎಲ್ಲ ಇಲಾಖೆಗಳೊಡನೆ ಸಭೆ ನಡೆಸಿ ಜಾತ್ರೆ ಸುಗಮವಾಗಿ ಮತ್ತು ಸಂಭ್ರಮದಿಂದ ನಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕುಡಿವ ನೀರು, ದೇವರ ದರ್ಶನಕ್ಕೆ ಬ್ಯಾರಿಕೇಡ್ ಅಳವಡಿಕೆ, ಸರದಿ ಸಾಲಿನಲ್ಲಿ ಬರುವವರಿಗೆ ನೆರಳಿನ ವ್ಯವಸ್ಥೆ, ಶಾಮಿಯಾನ ಅಳವಡಿಕೆ ಭರದಿಂದ ಸಾಗಿದೆ.ಗಾಂಧಿ ಬಜಾರ್‌ನ ದ್ವಾರ ಬಾಗಿಲಿನಲ್ಲಿ 45 ಅಡಿ ಎತ್ತರದ ಚಾಮುಂಡೇಶ್ವರಿ ಮೂರ್ತಿ ನಿರ್ಮಾಣ ಮಾಡಲಾಗುತ್ತಿದೆ. ಇದು ಚಲಿಸುವ ರೀತಿಯಲ್ಲಿರುವುದರಿಂದ ಜನರನ್ನು ಭಕ್ತರನ್ನು ಆಕರ್ಷಿಸಲಿದೆ. ಸ್ವಚ್ಛತೆಗೆ ಮತ್ತು ಕುಡಿಯುವ ನೀರಿಗೆ ಆದ್ಯತೆ ಕೊಡುವ ದೃಷ್ಟಿಯಿಂದ ಈಗಾಗಲೇ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ದೇವಸ್ಥಾನ ಸಮಿತಿಯವರು ಚರ್ಚೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಕೂಡ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಂಡಿದೆ.
ಮಾ.12ರಿಂದ 16 ರವರೆಗೆ 5 ದಿನಗಳ ಕಾಲ ನಡೆಯುವ ಮಾರಿಕಾಂಬ ಜಾತ್ರೆಯ ಯಶಸ್ಸಿಗೆ ಸಕಲ ಸಿದ್ಧತೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ.- - - -9ಎಸ್‌ಎಂಜಿಕೆಪಿ04: ಶಿವಮೊಗ್ಗ ಶ್ರೀ ಕೋಟೆ ಮಾರಿಕಾಂಬ ಜಾತ್ರೆ ಹಿನ್ನೆಲೆ ಸಿಂಗಾರಗೊಂಡಿರುವ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ. -9ಎಸ್‌ಎಂಜಿಕೆಪಿ05: ಶಿವಮೊಗ್ಗ ಶ್ರೀ ಕೋಟೆ ಮಾರಿಕಾಂಬ ಜಾತ್ರೆ ಹಿನ್ನೆಲೆ ಗಾಂಧಿ ಬಜಾರ್‌ನಲ್ಲಿ ಸಿದ್ದಗೊಳ್ಳುತ್ತಿರುವ ಮುಖ್ಯದ್ವಾರ.