ಶಿವಮೊಗ್ಗ ಜಿಲ್ಲೆಯಲ್ಲಿ 31.71 ಮಿ.ಮೀ. ಮಳೆ ದಾಖಲು : ವಾಡಿಕೆಗಿಂತ ಹೆಚ್ಚು ಮಳೆ ವರದಿ

| Published : Jul 24 2024, 12:27 AM IST / Updated: Jul 24 2024, 12:07 PM IST

ಶಿವಮೊಗ್ಗ ಜಿಲ್ಲೆಯಲ್ಲಿ 31.71 ಮಿ.ಮೀ. ಮಳೆ ದಾಖಲು : ವಾಡಿಕೆಗಿಂತ ಹೆಚ್ಚು ಮಳೆ ವರದಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 603.54 ಮಿ.ಮೀ. ವಾಡಿಕೆ ಮಳೆಯ ಪೈಕಿ ಜು.23ರವರೆಗೆ 748.54 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಹೆಚ್ಚು ಮಳೆ ವರದಿಯಾಗಿದೆ.

 ಶಿವಮೊಗ್ಗ :  ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಪ್ರಮಾಣ ಕೊಂಚ ತಗ್ಗಿದ್ದು, ಕಳೆದ 24 ಗಂಟೆಯಲ್ಲಿ 31.71 ಮಿ.ಮೀ. ಸರಾಸರಿ ಮಳೆ ಸುರಿದಿದೆ.

ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 603.54 ಮಿ.ಮೀ. ವಾಡಿಕೆ ಮಳೆಯ ಪೈಕಿ ಜು.23ರವರೆಗೆ 748.54 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಹೆಚ್ಚು ಮಳೆ ವರದಿಯಾಗಿದೆ.

ಕಳೆದ 24 ಗಂಟೆಯಲ್ಲಿ ಶಿವಮೊಗ್ಗದಲ್ಲಿ 13 ಮಿ.ಮೀ. ಭದ್ರಾವತಿ 6.80 ಮಿ.ಮೀ, ತೀರ್ಥಹಳ್ಳಿ 36.90 ಮಿ.ಮೀ., ಸಾಗರದಲ್ಲಿ 62.50 ಮಿ.ಮೀ, ಶಿಕಾರಿಪುರ 19.50 ಮಿ.ಮೀ, ಸೊರಬದಲ್ಲಿ 36.30 ಮಿ.ಮೀ, ಹೊಸನಗರದಲ್ಲಿ 47 ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಜಲಾಶಯಗಳಲ್ಲೂ ಒಳ ಹರಿವಿನ ಪ್ರಮಾಣ ತಗ್ಗಿದೆ. ತುಂಗಾ ಜಲಾಶಯಕ್ಕೆ ಮಂಗಳವಾರ 33685 ಕ್ಯುಸೆಕ್‌ ನೀರು ಹರಿದು ಬಂದರೆ, ಭದ್ರಾ ಜಲಾಶಯಕ್ಕೆ 20045 ಕ್ಯುಸೆಕ್‌ ನೀರು ಹರಿದು ಬಂದಿದೆ. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 168.2ಕ್ಕೆ ಏರಿಕೆಯಾಗಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 50.95 ಟಿಎಂಸಿ ನೀರು ಸಂಗ್ರಹವಾಗಿದೆ.

ಇನ್ನೂ ಲಿಂಗನಮಕ್ಕಿ ಮಂಗಳವಾರ 41269 ಕ್ಯುಸೆಕ್‌ ನೀರು ಹರಿದು ಬಂದಿದ್ದು, ಗರಿಷ್ಟ 1819 ಅಡಿ ಸಾಮರ್ಥ್ಯದ ಜಲಾಶಯದ ಮಟ್ಟ ಸದ್ಯ 1799 ಅಡಿಗೆ ಏರಿಕೆಯಾಗಿದೆ.

ತೀರ್ಥಹಳ್ಳಿಯಲ್ಲಿ ಶೇ.24 ರಷ್ಟು ಅಧಿಕ ಮಳೆ

ತೀರ್ಥಹಳ್ಳಿ: ತಾಲೂಕಿನಲ್ಲಿ ಮಳೆಯ ಬಿರುಸು ಕಳೆದ ಎರಡು ದಿನಗಳಿಂದ ಇಳಿಮುಖವಾಗಿದೆಯಾದರೂ ಬೀಸುತ್ತಿರುವ ಗಾಳಿಯಿಂದಾಗಿ ಹಲವಾರು ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ತಾಲೂಕಿನಲ್ಲಿ ಜನವರಿಯಿಂದ ಜುಲೈ 23 ರವರೆಗೆ 1795.5 ಮಿ.ಮೀ ಮಳೆಯಾಗಿದ್ದು, ವಾಡಿಕೆಯ ಶೇ. 24 ನಷ್ಟು ಅಧಿಕ ಮಳೆ ಬಿದ್ದಿದೆ.

ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಂಟೂರಿನ ಡಾಕಮ್ಮ ಸಿದ್ದಪ್ಪಗೌಡರ ವಾಸದ ಮನೆಯ ಮಾಡು ಕುಸಿದು ಹಾನಿ ಸಂಭವಿಸಿದೆ. ಸುದೈವಶಾತ್ ಯಾವುದೇ ಅಪಾಯವಾಗಿಲ್ಲ. ಪಟ್ಟಣ ಸಮೀಪದ ಇಂದಿರಾನಗರದ ಮಂಜಾನಾಯ್ಕರ ಮನೆ ಗೋಡೆ ಕುಸಿದಿದ್ದು ಮನೆ ಬೀಳುವ ಸ್ಥಿತಿ ತಲುಪಿದೆ. ಮಂಡಗದ್ದೆ ಹೋಬಳಿ ಸಿಂಗನಬಿದಿರೆ ಗ್ರಾಪಂ ವ್ಯಾಪ್ತಿಯ ಹಳಗ ಗ್ರಾಮದ ದಾಸ ಎಂಬುವವರ ವಾಸದ ಮನೆಯ ಒಂದು ಭಾಗ ಮಳೆಯಿಂದ ಕುಸಿದು ನೆಲಸಮವಾಗಿದೆ.

ಇದೇ ಹೋಬಳಿಯ ಕಣಗಲಕೊಪ್ಪದಲ್ಲಿ ಸಂಕಮ್ಮ ಎಂಬುವವರ ವಾಸದ ಮನೆ ಮೇಲೆ ಮರ ಬಿದ್ದು ಮಾಡು ಕುಸಿದಿದೆ. ಲಿಂಗಾಪುರದ ರತ್ನಮ್ಮ ಹಾಗೂ ದೀಕ್ಷಾ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಹೆದ್ದೂರು ಗ್ರಾಪಂ ವ್ಯಾಪ್ತಿಯ ಮುಂಡುವಳ್ಳಿ ಚಂದ್ರಶೇಕರ್ ಮತ್ತು ಇದೇ ಗ್ರಾಮದ ವಾಸಿಗಳಾದ ಸವಿತಾ ಶಿವಪ್ಪ, ಹೊಸಳ್ಳಿ ಶಿವಪ್ಪ ಹಾಗೂ ಹೊಸಳ್ಳಿ ಚಂದ್ರು , ನಾಲೂರು ಗ್ರಾಪಂ ವ್ಯಾಪ್ತಿಯ ಕೊಳಗಿ ಅಕ್ಕಣಮ್ಮ, ದೇವಂಗಿ ಸಮೀಪದ ಜ್ಯೋತಿಸರ ಗ್ರಾಮದ ಸೂರಮ್ಮ, ಸಾಲ್ಗಡಿ ಗ್ರಾಪಂ ವ್ಯಾಪ್ತಿಯ ಕಲ್ಯಾಣಿ ಇನ್ನೂ ಹಲವರ ಮನೆಗಳಿಗೆ ಹಾನಿ ಸಂಭವಿಸಿದೆ.

ಕಳೆದ 24 ತಾಸು ಅವಧಿಯಲ್ಲಿ ಆಗುಂಬೆಯಲ್ಲಿ 50, ಮಾಳೂರು 33.2, ಆರಗದಲ್ಲಿ 56, ಮೇಗರವಳ್ಳಿ 75, ಅರಳಸುರುಳಿ 21.6, ತೀರ್ಥಹಳ್ಳಿ 36.6,ಹುಂಚದಕಟ್ಟೆ 47.2, ಮಂಡಗದ್ದೆಯಲ್ಲಿ 25 ಮಿ.ಮೀ. ಮಳೆಯಾಗಿದೆ.