ಸಾರಾಂಶ
ದೇ.ಜ.ಗೌ. ಅವರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಹೋರಾಟದ ಬದುಕು’ ಎಂಬುದು ಅವರ ಬದುಕಿನ ಪ್ರಾಮಾಣಿಕ ಚಿತ್ರವನ್ನು ನೀಡುವ ಗಮನಾರ್ಹವಾದ ಕೃತಿಯಾಗಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ದೇ. ಜವರೇಗೌಡ ಅವರು ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯಕ್ಕೆ ತಮ್ಮದೇ ಆದ ಅದ್ವಿತೀಯ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿ ಅವರು ಮಾಡಿರುವ ಶ್ರಮ ಅವಿಸ್ಮರಣೀಯ. ಕನ್ನಡ ಆಡಳಿತ ಭಾಷೆಯಾಗಬೇಕು, ಕನ್ನಡ ಮಾಧ್ಯಮವಾಗಬೇಕು, ಕನ್ನಡ ಸಂಸ್ಕೃತಿ, ಇತಿಹಾಸ, ಕಾವ್ಯ ಪರಂಪರೆಯಿಂದ ದೇಶದೆಲ್ಲೆಡೆ ಕನ್ನಡ ವಿಜೃಂಭಿಸಬೇಕು ಎಂಬ ಕಳಕಳಿಯಿಂದ ಇಡೀ ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಹೋರಾಟ ಮಾಡಿರುವ ದೇ.ಜ.ಗೌ. ಅವರು ಕನ್ನಡ ಸಾರಸ್ವತ ಲೋಕದ ಮಿನುಗುತಾರೆಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ. ಪಾಟೀಲ ಹೇಳಿದರು.ನಗರದ ಶಿವನಗರದಲ್ಲಿರುವ ‘ಶ್ರೀ ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ದೇ.ಜವರೇಗೌಡ್‍ರ 109ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ದೇ.ಜ.ಗೌ. ಅವರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಹೋರಾಟದ ಬದುಕು’ ಎಂಬುದು ಅವರ ಬದುಕಿನ ಪ್ರಾಮಾಣಿಕ ಚಿತ್ರವನ್ನು ನೀಡುವ ಗಮನಾರ್ಹವಾದ ಕೃತಿಯಾಗಿದೆ ಎಂದು ನುಡಿದರು.ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ, ಶಿಕ್ಷಕರಾದ ರೇಖಾ ಬಿ.ಪಾಟೀಲ, ಮಂಜುಳಾ ಬಿ.ನರೋಣಾ, ನಂದಿನಿ, ಸೇವಕಿ ಸುರೇಖಾ ಸಣಮನಿ ಹಾಗೂ ವಿದ್ಯಾರ್ಥಿಗಳಿದ್ದರು.