ಸಾರಾಂಶ
ರಾಷ್ಟ್ರೀಯ ಹೆದ್ದಾರಿ ೭೫ ರ ಶಿರಾಡಿಘಾಟ್ ವ್ಯಾಪ್ತಿಯ ರಸ್ತೆ ನಿರ್ವಹಣೆಯನ್ನು ಇಲಾಖೆ ನಿರ್ಲಕ್ಷಿಸಿರುವ ಪರಿಣಾಮ ಸಾಕಷ್ಟು ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ರಾಷ್ಟ್ರೀಯ ಹೆದ್ದಾರಿ ೭೫ ರ ಶಿರಾಡಿಘಾಟ್ ವ್ಯಾಪ್ತಿಯ ರಸ್ತೆ ನಿರ್ವಹಣೆಯನ್ನು ಇಲಾಖೆ ನಿರ್ಲಕ್ಷಿಸಿರುವ ಪರಿಣಾಮ ಸಾಕಷ್ಟು ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ.
೨೦೧೩-೧೭ ನೇ ಸಾಲಿನವರಗೆ ಶಿರಾಡಿಘಾಟ್‌ನ ೧೩೩ ನೇ ಕಿಮೀ ನಿಂದ ೧೬೩ ನೇ ಕಿಮೀ ವರೆಗಿನ ೩೦ ಕಿಮೀ ಘಾಟ್ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗಿತ್ತು.
ಕಾಂಕ್ರಿಟೀಕರಣಗೊಂಡ ಐದು ವರ್ಷಗಳವರೆಗೆ ಗುತ್ತಿಗೆದಾರರೇ ನಿರ್ವಹಣೆಯನ್ನು ಹೊತ್ತಿದ್ದರು. ಸದ್ಯ ೨೦೨೩ ರ ಮಾರ್ಚ್ ತಿಂಗಳಿಗೆ ಗುತ್ತಿಗೆದಾರರ ನಿರ್ವಹಣೆಯ ಅವಧಿ ಮುಗಿದಿರುವುದರಿಂದ ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೆದ್ದಾರಿ ನಿರ್ವಹಣೆ ಮಾಡಬೇಕಿದೆ.
ಆದರೆ, ಹಣ ಬಿಡುಗಡೆಯಾಗಿಲ್ಲ ಎಂಬ ಕಾರಣಕ್ಕೆ ನಿರ್ವಹಣೆಯನ್ನು ನಿರ್ಲಕ್ಷಿಸಿರುವ ಪರಿಣಾಮ ಅವಘಡಗಳಿಗೆ ಆಹ್ವಾನ ನೀಡುತ್ತಿದೆ.
ಆನೆಹುಲ್ಲಿನ ಸಮಸ್ಯೆ: ಶಿರಾಡಿಘಾಟ್ ರಸ್ತೆಯ ಎರಡೂ ಬದಿ ಆಳೆತ್ತರದ ಆನೆ ಹುಲ್ಲು ಬೆಳೆದಿದ್ದು, ಈ ಹುಲ್ಲು ಹಲವೆಡೆ ತಿರುವಿನಲ್ಲಿ ಎರಡರಿಂದ ಮೂರು ಅಡಿಗಳಷ್ಟು ರಸ್ತೆಗೆ ಚಾಚಿಕೊಂಡಿದೆ. ಇದರಿಂದಾಗಿ ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತಗಳಾಗುತ್ತಿವೆ.
ಇದಲ್ಲದೆ ಹೆದ್ದಾರಿಯ ಎರಡೂ ಬದಿಯಲ್ಲಿ ಹಾಕಿರುವ ಹಲವು ಸೂಚನಾ ಫಲಕಗಳು ಆನೆಹುಲ್ಲಿನಿಂದ ಮುಚ್ಚಿಹೋಗಿದ್ದು, ರಸ್ತೆಯ ಮುನ್ನೋಟವೇ ತಿಳಿಯದೆ ಸಂಚರಿಸುವ ಸಾಕಷ್ಟು ವಾಹನ ಸವಾರರು ಎಡವಟ್ಟಿಗೆ ಸಿಲುಕಿಕೊಳ್ಳುತ್ತಾರೆ.
ರಸ್ತೆಯಲ್ಲಿ ಗುಂಡಿಗಳು: ಸದ್ಯ ಗುತ್ತಿಗೆದಾರರು ನಿರ್ವಹಣೆಯ ಅವಧಿ ಮುಗಿದ ನಂತರ ಮೂವತ್ತು ಕಿಮೀ ಉದ್ದದ ಶಿರಾಡಿಘಾಟ್ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಅಲ್ಲಲ್ಲಿ ನಿರ್ಮಾಣವಾಗಿದ್ದು, ವೇಗವಾಗಿ ಸಾಗುವ ಲಘು ವಾಹನಗಳು ಏಕಾಏಕಿ ಸಿಗುವ ಗುಂಡಿಗಳಿಗೆ ಧುಮುಕ್ಕುತ್ತಿರುವುದರಿಂದ ಅನಾಹುತ ಸಂಭವಿಸುತ್ತಿವೆ.
ಅದರಲ್ಲೂ ಗಡಿ ಚೌಡೇಶ್ವರಿ ದೇವಾಲಯದ ಸಮೀಪ ಹಾಗೂ ಮೂಲೆ ಹೊಳೆ ಸೇತುವೆ ಮೇಲೆ ನಿರ್ಮಾಣವಾಗಿರುವ ಗುಂಡಿಗಳು ಬಾರಿ ಅಪಾಯಕಾರಿಯಾಗಿವೆ.
ಕಿತ್ತಿರುವ ಡಾಂಬರ್: ಘಾಟ್‌ನ ತಿರುವು ರಸ್ತೆಯಲ್ಲಿ ಪದೇ ಪದೇ ರಸ್ತೆ ದುಸ್ಥಿತಿಗೆ ಈಡಾಗುತ್ತಿದ್ದರಿಂದ ೨೦೦೯ ರಲ್ಲಿ ನಾಲ್ಕು ಕಿಮೀ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಿ ಕಾಂಕ್ರೀಟ್ ಮೇಲೆ ಮ್ಯಾಸ್ಟೀಕ್ ಎಂಬ ಉತ್ತಮ ಗುಣಮಟ್ಟದ ಡಾಂಬರ್ ಹಾಕಲಾಗಿತ್ತು.
ಸದ್ಯ ಈ ಡಾಂಬರ್ ತಿರುವು ರಸ್ತೆಯಲ್ಲಿ ಅಲ್ಲಲ್ಲಿ ಕಿತ್ತುಹೋಗಿರುವುದರಿಂದ ಲಘು ವಾಹನಗಳು ನಿಯಂತ್ರಣ ಕಳೆದುಕೊಂಡು ಅವಘಡಗಳಿಗೆ ಈಡಾಗುತ್ತಿವೆ.
ಒಣ ಮರಗಳು: ಘಾಟ್‌ನ ಮೂವತ್ತು ಕಿಮೀ ದೂರದವರೆಗೆ ಹಲವೆಡೆ ಸಾಕಷ್ಟು ಒಣ ಮರಗಳು ಹೆದ್ದಾರಿಯೆಡೆಗೆ ವಾಲಿದ್ದು, ಯಾವ ಕ್ಷಣದಲ್ಲಾದರೂ ರಸ್ತೆಗೆ ಬೀಳುವ ಸಾಧ್ಯತೆ ಇದೆ.
ಅಲ್ಲದೆ ಅಲ್ಲಲ್ಲಿ ರಸ್ತೆ ಬದಿಗೆ ಬಿದ್ದಿರುವ ಮರ ಹಾಗೂ ಬೃಹತ್ ಬಳ್ಳಿಗಳನ್ನು ತೆರವುಗೊಳಿಸದ ಕಾರಣ ಕೆಲವೆಡೆ ಹೆದ್ದಾರಿ ಸಂಚಾರ ಏಕಮುಖವಾಗಿದೆ.
ಪಾಸ್ಟ್ ಭ್ರೇಕರ್
ಸುಮಾರು ೧೪ ಕಿಮೀ ದೂರ ಹೆದ್ದಾರಿಗೆ ಪರ್ಯಾಯವಾಗಿ ಕೆಂಪುಹೊಳೆ ಹರಿಯುತ್ತಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ ನದಿಬದಿಯ ಹೆದ್ದಾರಿ ಹಲವೆಡೆ ಕುಸಿದಿದೆ. ನಿರ್ವಹಣೆಯ ನಿರ್ಲಕ್ಷ್ಯದಿಂದ ಪಾಸ್ಟ್ ಬ್ರೇಕರ್‌ಗಳೂ ಕಣ್ಮರೆಯಾಗಿರುವ ಕಾರಣ ಅಪಾಯಕಾರಿ ಪ್ರದೇಶದಲ್ಲಿ ಅತಿವೇಗದಲ್ಲಿ ಸಾಗುವ ವಾಹನಗಳಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ.
ಚರಂಡಿಯೆ ಇಲ್ಲದ ಹೆದ್ದಾರಿ: ಸದ್ಯ ಹೆದ್ದಾರಿ ಬದಿ ಬಾರಿ ಪ್ರಮಾಣದ ಆನೆಹುಲ್ಲು ಹಾಗೂ ಪೊದೆಗಳು ಬೆಳೆದಿರುವುದರಿಂದ ೩೦ ಕಿಮೀ ಹೆದ್ದಾರಿಯಲ್ಲಿನ ಚರಂಡಿ ಸಂಪೂರ್ಣ ಮುಚ್ಚಿದ್ದು, ಹೆದ್ದಾರಿಯ ಹಲವೆಡೆ ಮಳೆ ನೀರು ನದಿಯಂತೆ ಹರಿಯುವುದರಿಂದಾಗಿ ಲಘು ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.
ಚತುಷ್ಪಥ ಹೆದ್ದಾರಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿರುವ ಹಾಸನದಿಂದ ತಾಲೂಕಿನ ಹೆಗದ್ದೆ ಗ್ರಾಮದವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಸದ್ಯ ತಾಲೂಕಿನ ಆನೆಮಹಲ್ ಗ್ರಾಮದವರಗೆ ಬಾಗಶಃ ಮುಗಿದಿದೆ.
ಆದರೆ ಬಾಕಿ ಉಳಿದಿದ್ದ ಆನೆಮಹಲ್ ಗ್ರಾಮದಿಂದ ಹೆಗದ್ದೆ ಗ್ರಾಮದವರೆಗಿನ ೧೪ ಸಂಚಾರ ಮತ್ತೆ ದುಸ್ಥರವಾಗಿದ್ದು, ಡಾಂಬರೀಕರಣಗೊಂಡ ಮೂರೇ ತಿಂಗಳಲ್ಲಿ ಹಾಕಿದ್ದ ಡಾಂಬರ್ ಕಣ್ಮರೆಯಾಗಿರುವುದರಿಂದ ಮತ್ತೆ ಗುಂಡಿಗಳು ಯಥಾಸ್ಥಿತಿ ಬಾಯ್ತೆರಿದಿವೆ.
ಅಪಾಯಕಾರಿ ಸ್ಥಿತಿಯಲ್ಲಿ ಎತ್ತಿನಹೊಳೆ ಸೇತುವೆ: ತಾಲೂಕಿನ ಎತ್ತಿನಹಳ್ಳ ಗ್ರಾಮದ ಸಮೀಪವಿರುವ ಎತ್ತಿನಹೊಳೆ ಸೇತುವೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಪೂರ್ಣ ನಿರ್ಲಕ್ಷಿಸಿರುವುದರಿಂದ ಸೇತುವೆ ಮೇಲೆ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ.
ಮಳೆ ನೀರು ಹೋರ ಹೋಗಲು ಅವಕಾಶವಿಲ್ಲದ ಕಾರಣ, ಮಳೆ ಬಂದರೆ ಸೇತುವೆ ಮೇಲೆ ಮೂರು ಅಡಿಗೂ ಅಧಿಕ ನೀರು ಶೇಖರವಾಗುವುದರಿಂದ ಅರಿವಿಲ್ಲದೆ ಸಾಗುವ ಲಘು ವಾಹನಗಳು ಅಪಾಯಕ್ಕೆ ಸಿಲುಕುತ್ತಿವೆ.
ಶಿರಾಡಿಘಾಟ್ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ಲಕ್ಷಿಸಿರುವುದರಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಶೀಘ್ರ ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ.
-ಕೀರ್ತಿ. ವಾಹನ ಸವಾರ. ಹರಗರಹಳ್ಳಿ.
ಘಾಟ್ ರಸ್ತೆ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ತಗ್ಗುಗುಂಡಿಗಳು ಬಿದ್ದಿರುವ ೧೪ ಕಿಮೀ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಸೂಚಿಸಲಾಗಿದೆ.
-ಸಿಮೆಂಟ್ ಮಂಜು. ಶಾಸಕ. ಸಕಲೇಶಪುರ-ಆಲೂರು ಕ್ಷೇತ್ರ.