ಶಿರಗುಂಪಿ ದಲಿತರ ಅನಿರ್ದಿಷ್ಟಾವಧಿ ಧರಣಿ ಅಂತ್ಯ

| Published : Sep 21 2024, 01:52 AM IST

ಸಾರಾಂಶ

ವಿವಿಧ ದಲಿತ ಸಂಘಟನೆಗಳು ಹಾಗೂ ಶಿರಗುಂಪಿ ಗ್ರಾಮದ ದಲಿತರು ಯಲಬುರ್ಗಾ ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂದೆ ನಡೆಸುತ್ತಿದ್ದ ಅನಿರ್ಧಿಷ್ಟ ಧರಣಿ ಶುಕ್ರವಾರ ತಹಸೀಲ್ದಾರ್ ಭರವಸೆ ಬಳಿಕ ಅಂತ್ಯಗೊಂಡಿದೆ.

ಯಲಬುರ್ಗಾ: ವಿವಿಧ ದಲಿತ ಸಂಘಟನೆಗಳು ಹಾಗೂ ಶಿರಗುಂಪಿ ಗ್ರಾಮದ ದಲಿತರು ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂದೆ ನಡೆಸುತ್ತಿದ್ದ ಅನಿರ್ಧಿಷ್ಟ ಧರಣಿ ಶುಕ್ರವಾರ ಅಂತ್ಯಗೊಂಡಿದೆ.

ತಾಲೂಕಿನ ಶಿರಗುಂಪಿ ಗ್ರಾಮದ ಜಮೀನಿನ ಸರ್ವೆ ನಂ. ೫೭ ವಿಸ್ತೀರ್ಣ ೧೪ ಎಕರೆ ೨೨ ಗುಂಟೆ ಜಮೀನಿನಲ್ಲಿ ಕಳೆದ ೭೦ ವರ್ಷಗಳಿಂದ ದಲಿತ ಸಮುದಾಯ ಸಾಗುವಳಿ ಮಾಡುತ್ತಿದ್ದು, ಬೇರೆಯವರು ಪಹಣಿ ವರ್ಗಾವಣೆ ಮಾಡಿಸಿಕೊಂಡಿರುವುದನ್ನು ರದ್ದುಪಡಿಸಿ ಪಹಣಿಯನ್ನು ನಮ್ಮ ಹೆಸರಿನಲ್ಲಿ ವರ್ಗಾವಣೆ ಮಾಡಿಕೊಡುವಂತೆ ಒತ್ತಾಯಿಸಿ ೧೫ ದಿನಗಳಿಂದ ನಾನಾ ದಲಿತ ಸಂಘಟನೆಗಳು ಹಾಗೂ ಶಿರಗುಂಪಿ ಗ್ರಾಮದ ದಲಿತರು ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು.

ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಶುಕ್ರವಾರ ಧರಣಿ ಸ್ಥಳಕ್ಕೆ ಆಗಮಿಸಿ ಅವರ ಮನವೊಲಿಸಿ, ಧರಣಿ ಹಿಂಪಡೆಯಲು ಸೂಚಿಸಿದರು.

ಭೀಮ್ ಗರ್ಜನೆ ಸಂಘಟನೆ ಕಲಬುರ್ಗಿ ವಿಭಾಗಿಯ ಉಪಾಧ್ಯಕ್ಷ ಬಸವರಾಜ ನಡುವಲಮನಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಈ ಜಮೀನನ್ನು ಪಟ್ಟಣದ ಮಠಾಧೀಶರೊಬ್ಬರ ಪ್ರಭಾವದಿಂದ ತಮ್ಮ ಸಹೋದರರ ಹೆಸರಿನಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನು ಕೂಡಲೇ ರದ್ದುಪಡಿಸಿ ನಮಗೆ ಬಿಟ್ಟು ಕೊಡಬೇಕು. ಈಗ ತಹಸೀಲ್ದಾರರ ಮನವೊಲಿಕೆಯಿಂದ ತಾತ್ಕಾಲಿಕವಾಗಿ ಧರಣಿ ಹಿಂಪಡೆದ್ದಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಮಾನಗಳಲ್ಲಿ ಮತ್ತೆ ಶಿರಗುಂಪಿ ಗ್ರಾಮದಿಂದ ಕೊಪ್ಪಳ ಡಿಸಿ ಕಚೇರಿಯವರೆಗೆ ಎಲ್ಲ ಕುಟುಂಬ ಸಮ್ಮೇತವಾಗಿ ಪಾದಯಾತ್ರೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಬಳಿಕ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮನವಿ ಸ್ವೀಕರಿಸಿ ಮಾತನಾಡಿ, ತಾವು ನೀಡಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶಿವಪ್ಪ ಭಂಡಾರಿ, ಛತ್ರೆಪ್ಪ ಚಲವಾದಿ, ವಸಂತ ಭಾವಿಮನಿ, ಯಮನೂರಪ್ಪ ಶಿರಗುಂಪಿ, ಸಿದ್ದಪ್ಪ ಕಟ್ಟಿಮನಿ, ಶಂಕರ ಜಕ್ಕಲಿ, ಶಶಿಧರ ಹೊಸ್ಮನಿ, ಲಕ್ಷ್ಮಣ ಕಾಳಿ, ಪ್ರಕಾಶ ಹುಚ್ಚಮ್ಮನವರ, ದುರಗೇಶ ನಡುವಲಮನಿ, ಆಶೋಕ ಮಾದರ, ಹನುಮಂತಪ್ಪ ಹೊಸಳ್ಳಿ, ತಿಪ್ಪಣ್ಣ ಮ್ಯಾಗೇರಿ, ಚಂದಾಲಿಂಗ ಹಿರೇಮನಿ, ಶರಣಪ್ಪ ಹಿರೇಮನಿ, ಯಲ್ಲಪ್ಪ ಸಣ್ಣಿಗನೂರು, ಪರಸಪ್ಪ ಹರಿಜನ, ಸಾವಕ್ಕ ಚಲವಾದಿ, ರೇಣುಕಾ ಚಲವಾದಿ, ಈರವ್ವ, ಶಾಂತವ್ವ, ಹುಲಿಗೆವ್ವ, ಮಂಜವ್ವ, ಶರಣವ್ವ, ಪ್ರಕಾಶ ಬಣಕಾರ, ಸಾವಿತ್ರೆವ್ವ, ಕಳಕಪ್ಪ ಹರಿಜನ, ಪರಸಪ್ಪ ಸೇರಿದಂತೆ ಮತ್ತಿತರರು ಇದ್ದರು. ಪಿಎಸ್‌ಐ ವಿಜಯಪ್ರತಾಪ ಉಪಸ್ಥಿತರಿದ್ದರು.