ಸಾರಾಂಶ
ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂದೇ ಖ್ಯಾತಿ ಹೊಂದಿರುವ ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ಶ್ರೀ ಮಂಟಿಗಮ್ಮ ದೇವಿಯ ಜಾತ್ರೆ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ, ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂದೇ ಖ್ಯಾತಿ ಹೊಂದಿರುವ ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ಶ್ರೀ ಮಂಟಿಗಮ್ಮ ದೇವಿಯ ಜಾತ್ರೆ ಭಾನುವಾರ ಸಂಪನ್ನಗೊಂಡಿತು.ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಿಯ ದ್ವೈವಾರ್ಷಿಕ ಜಾತ್ರೋತ್ಸವ ಭಾನುವಾರ ದೇವಿಯ ದೇಗುಲ ಪ್ರವೇಶದ ದ್ವಾರವನ್ನು ಮುಚ್ಚುವ ಮೂಲಕ ಸಂಪನ್ನಗೊಂಡಿತು.
ಗ್ರಾಮದಲ್ಲಿ ಶುಕ್ರವಾರ ರಾತ್ರಿಯಿಂದ ಪವಿತ್ರ ಬನದಲ್ಲಿ ಎರಡು ದಿನಗಳ ಕಾಲ ಶ್ರೀ ಮಂಟಿಗಮ್ಮ ದೇವಸ್ಥಾನದಲ್ಲಿ ನಡೆದ ದೇವಿಯ ವಿಶೇಷ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳಲ್ಲಿ ಕೊಡಗು ಜಿಲ್ಲೆಯ ಆಸ್ತಿಕರು ಸೇರಿದಂತೆ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ಗ್ರಾಮಗಳ ಆಸ್ತಿಕರು ಮತ್ತು ಗ್ರಾಮಸ್ಥರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.ಮಂಟಿಗಮ್ಮ ದೇವರ ಮೂರ್ತಿಗೆ ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು. ದೇವರ ಹಬ್ಬದ ಅಂಗವಾಗಿ ದೇವಸ್ಥಾನ ಸೇರಿದಂತೆ ಇಡೀ ಗ್ರಾಮವನ್ನು ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸಲಾಗಿತ್ತು.
ದೇವಿಯ ದರ್ಶನಕ್ಕೆ ತೆರಳಿದ್ದ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯ ವತಿಯಿಂದ ದಾನಿಗಳ ನೆರವಿನೊಂದಿಗೆ ಎರಡು ದಿನಗಳ ಕಾಲ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ಪವಿತ್ರ ಬನದಲ್ಲಿ ಶ್ರೀ ಮಂಟಿಗಮ್ಮ ದೇವಿಗೆ ಅಲಂಕರಿಸಿದ್ದ ಆಭರಣಗಳನ್ನು ಶನಿವಾರ ರಾತ್ರಿ ಬುಟ್ಟಿಗಳೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮರಳಿ ಗ್ರಾಮದ ಕೋಟೆಯ ದೇವಿಯ ಮೂಲಸ್ಥಾನಕ್ಕೆ ತಂದು ಭದ್ರಪಡಿಸಲಾಯಿತು.
ಗ್ರಾಮ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಎಸ್.ಜೆ.ಉಮೇಶ್, ಕಾರ್ಯದರ್ಶಿ ಎಂ.ಎಸ್.ಗಣೇಶ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆೆದವು.