ಬೆಳ್ತಂಗಡಿ ತಾಲೂಕಿನ ಶಿಶಿಲದಿಂದ ಚಿಕ್ಕಮಗಳೂರು ಜಿಲ್ಲೆಯ ಬೈರಾಪುರ ನಡುವಿನ ಕಚ್ಚಾ ರಸ್ತೆ ಅಭಿವೃದ್ಧಿಗೆ ಚಿಕ್ಕಮಗಳೂರು ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಂಟಿ ಪರಿಶೀಲನೆ ನಡೆಸಿ, ವಿವರವಾದ ವರದಿ ತಕ್ಷಣವೇ ಸಲ್ಲಿಸಬೇಕು ಎಂದು ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ನಿರ್ದೇಶನ ನೀಡಿದ್ದಾರೆ.

ಉಡುಪಿ: ಬೆಳ್ತಂಗಡಿ ತಾಲೂಕಿನ ಶಿಶಿಲದಿಂದ ಚಿಕ್ಕಮಗಳೂರು ಜಿಲ್ಲೆಯ ಬೈರಾಪುರ ನಡುವಿನ ಕಚ್ಚಾ ರಸ್ತೆ ಅಭಿವೃದ್ಧಿಗೆ ಚಿಕ್ಕಮಗಳೂರು ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಂಟಿ ಪರಿಶೀಲನೆ ನಡೆಸಿ, ವಿವರವಾದ ವರದಿ ತಕ್ಷಣವೇ ಸಲ್ಲಿಸಬೇಕು ಎಂದು ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ನಿರ್ದೇಶನ ನೀಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಈ ರಸ್ತೆಯ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮೇ. 18ರಂದು‌ ಪತ್ರ ಬರೆದಿದ್ದರು ಮತ್ತು ಪಿಎಂಜಿಎಸ್‌ವೈ ಅಥವಾ ಪಿಎಂ ಜನ್‌ಮನ್‌ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಕೋರಿದ್ದರು. ಈ ರಸ್ತೆ ನಿರ್ಮಾಣದಿಂದ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಂಪರ್ಕ ಸುಧಾರಿಸಲಿದ್ದು, ಎರಡೂ ಜಿಲ್ಲೆಗಳ ನಡುವಿನ ಅಂತರ ಕಡಿಮೆಗೊಳಿಸಲಿದೆ. ಶಿಶಿಲ ಮಾರ್ಗವಾಗಿ ದಕ್ಷಿಣ ಕನ್ನಡದ ಧಾರ್ಮಿಕ ತಾಣಗಳಿಗೆ ಶೀಘ್ರ ತಲುಪಲು ಲಕ್ಷಾಂತರ ಮಂದಿ ಯಾತ್ರಾರ್ಥಿಗಳಿಗೆ, ವ್ಯಾಪಾರ ವ್ಯವಹಾರಕ್ಕೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.

ಈ ಪತ್ರಕ್ಕೆ ಉತ್ತರವಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಜೇಕಬ್‌ ಎಲ್.‌ ಅವರು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಈ ಯೋಜನೆಯನ್ನು ಪಿಎಂಜಿಎಸ್‌ವೈ- 4 ಯೋಜನೆಯಡಿ ಅಥವಾ ರಾಜ್ಯ ಸರ್ಕಾರದ ಯಾವುದಾದರೂ ಯೋಜನೆಯಡಿ ಅನುಷ್ಠಾನಗೊಳಿಸಲು ತಿಳಿಸಿದ್ದಾರೆ.

ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳು ಚಿಕ್ಕಮಗಳೂರಿನ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಸಂಸದ ಕೋಟ ತಿಳಿಸಿದ್ದಾರೆ.