ಸಾರಾಂಶ
ದಾಬಸ್‍ಪೇಟೆ: ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲ್ಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಇ-ಪೌತಿ ಖಾತೆ ಆಂದೋಲನ ಆರಂಭಿಸಲಾಗಿದೆ. ತಂತ್ರಾಂಶದಲ್ಲಿ ಯಾವುದೇ ಅಡತಡೆ ಇಲ್ಲದೆ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆಯ ವರ್ಗಾವಣೆ ಆಗಲಿದೆ ಎಂದು ಉಪತಹಸೀಲ್ದಾರ್ ಶಶಿಧರ್ ತಿಳಿಸಿದರು.
ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಂದಾಯ ಇಲಾಖೆ ಹಮ್ಮಿಕೊಂಡಿರುವ ಇ–ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಕಂದಾಯ ಇಲಾಖೆಗೆ ಒಳಪಟ್ಟಿರುವ ಜಮೀನುಗಳ ಪಹಣಿಗಳಿಗೆ ಮಾಲೀಕರ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಇದರಿಂದ ಜಮೀನಿನ ದಾಖಲೆಗಳು ನಕಲಿ ಆಗುವುದು ತಪ್ಪಿದೆ. ಜೊತೆಗೆ ಈಗಾಗಲೇ ಗ್ರಾಮಾಡಳಿತಾಧಿಕಾರಿಗಳು ಆಧಾರ್ ಜೋಡಣೆ ಮಾಡುವ ಸಂದರ್ಭದಲ್ಲಿ ಮರಣ ಹೊಂದಿದ, ಈಗ ಹೆಸರಿನಲ್ಲಿರುವ ಪಹಣಿಗಳನ್ನು ಗುರುತಿಸುವ ಕೆಲಸ ಮಾಡಿರುತ್ತಾರೆ. ಹಾಗಾಗಿ ಈ ಅಂಕಿ ಅಂಶ ಬಳಸಿಕೊಂಡು ಕಂದಾಯ ಅಧಿಕಾರಿಗಳು ನೂತನ ತಂತಾಂಶ್ರದ ಮೂಲಕ ಅರ್ಜಿಗಳನ್ನು ವಿಲೇವಾರಿ ಮಾಡಬಹುದು ಎಂದು ತಿಳಿಸಿದರು.ರಾಜಸ್ವನಿರೀಕ್ಷಕ ಸುಂದರ್ ರಾಜ್ ಮಾತನಾಡಿ, ಮೃತ ವ್ಯಕ್ತಿಗೆ ಸಂಬಂಧಿಸಿದ ಇತರೆ ಜಮೀನುಗಳ ಸರ್ವೆ ನಂಬರ್‍ಗಳನ್ನು ದಾಖಲಿಸಿ ಮೃತ ವ್ಯಕ್ತಿಯ ಎಲ್ಲಾ ವಾರಸುದಾರರ ಒಪ್ಪಿಗೆಯನ್ನು ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಈ ಎಲ್ಲಾ ವಿವರಗಳು ದಾಖಲಾದ ಮಾಹಿತಿಯು ಭೂಮಿ ಕೇಂದ್ರಕ್ಕೆ ರವಾನಿಯಾಗಿ ಸ್ವಯಂ ಚಾಲಿತವಾಗಿ ಮ್ಯುಟೇಷನ್ (ಎಂ.ಆರ್) ಪ್ರಕ್ರಿಯೆ ಮೂಲಕ ವಾರುಸುದಾರರ ಹೆಸರಿಗೆ ಪಹಣಿ ಬರಲಿದೆ. ಇ- ಪೌತಿ ಖಾತಾ ಆಂದೋಲನದಿಂದ ಆಸ್ತಿಯ ಎಲ್ಲಾ ವಾರಸುದಾರರ ಒಪ್ಪಿಗೆಯು ದಾಖಲಾಗುವುದರಿಂದ ಕಾನೂನು ಬದ್ಧರಲ್ಲದ ವಾರಸುದಾರರಿಗೆ ಖಾತೆಯಾಗುವುದು ತಪ್ಪಲಿದೆ ಎಂದರು
ಏನೇನು ದಾಖಲೆ ಬೇಕು : ಅರ್ಜಿದಾರರು ಆಧಾರ್ ಕಾರ್ಡ್ ವಂಶವೃಕ್ಷ ಮೃತರ ಮರಣ ಪ್ರಮಾಣ ಪತ್ರ ಅಫಿಡವಿಟ್ ಸೇರಿದಂತೆ ಇತರೆ ದಾಖಲೆ ತರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಸಂದರ್ಬದಲ್ಲಿ ಗ್ರಾಮಲೆಕ್ಕಿಗರಾದ ಬಾಲಕೃಷ್ಣ, ನವೀನ್, ಗ್ರಾ.ಪಂ.ಅಧ್ಯಕ್ಷೆ ಚೇತನಾ ನಾಗೇಶ್, ಸದಸ್ಯರುಗಳಾದ ದಿನೇಶ್ ನಾಯಕ್, ಮನುಪ್ರಸಾದ್, ಮುಖಂಡರುಗಳಾದ ಪರಮಶಿವಯ್ಯ, ನಾಗೇಶ್ ನಾಯಕ್, ಆನಂದ್ ಕುಮಾರ್, ಪುಟ್ಟರಾಜು, ಮಣಿಕಂಠ ಇತರರಿದ್ದರು.
ಪೋಟೋ 1 : ಸೋಂಪುರ ಹೋಬಳಿಯ ಶಿವಗಂಗೆ ಗ್ರಾ.ಪಂ.ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಂದಾಯ ಇಲಾಖೆ ಹಮ್ಮಿಕೊಂಡಿರುವ ಇ–ಪೌತಿ ಖಾತೆ ಆಂದೋಲನಕ್ಕೆ ಉಪತಹಸೀಲ್ದಾರ್ ಶಶಿಧರ್ ಚಾಲನೆ ನೀಡಿದರು.