ಸಾರಾಂಶ
ಶಿವಾಜಿ ಮಹಾರಾಜರು ತನ್ನ ಮರಾಠ ಸೈನ್ಯದ ಮೂಲಕ ಗೆರಿಲ್ಲಾ ಹೋರಾಟದ ತಂತ್ರ ಪರಿಚಯಿಸಿದ ಮೊದಲ ವ್ಯಕ್ತಿ. ಮೊಘಲರ ವಿರುದ್ಧ ಹಲವಾರು ಯುದ್ಧಗಳನ್ನು ಗೆದ್ದ ಅವರ ಶೌರ್ಯ ಮತ್ತು ತಂತ್ರಗಳಿಗೆ ಹೆಸರುವಾಸಿಯಾಗಿದ್ದರು
ಬಳ್ಳಾರಿ: ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ ಮೌಲ್ಯ ಮತ್ತು ಮರಾಠ ಪರಂಪರೆ ತಮ್ಮ ಆಡಳಿತ ಕೌಶಲ್ಯದಿಂದ ಇತಿಹಾಸದಲ್ಲಿ ಅಚ್ಚಳಿಯಾಗಿ ಉಳಿಯುವಂತೆ ಮಾಡಿದ ಮಹನೀಯರು ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿವಾಜಿ ಮಹಾರಾಜರು ತನ್ನ ಮರಾಠ ಸೈನ್ಯದ ಮೂಲಕ ಗೆರಿಲ್ಲಾ ಹೋರಾಟದ ತಂತ್ರ ಪರಿಚಯಿಸಿದ ಮೊದಲ ವ್ಯಕ್ತಿ. ಮೊಘಲರ ವಿರುದ್ಧ ಹಲವಾರು ಯುದ್ಧಗಳನ್ನು ಗೆದ್ದ ಅವರ ಶೌರ್ಯ ಮತ್ತು ತಂತ್ರಗಳಿಗೆ ಹೆಸರುವಾಸಿಯಾಗಿದ್ದರು ಎಂದು ತಿಳಿಸಿದರು.
ಕರ್ನಾಟಕ ಮರಾಠ ಛತ್ರಪತಿ ಶಿವಾಜಿ ಮಹಾರಾಜ್ ಸೇನೆಯ ಯುವ ರಾಜ್ಯಾಧ್ಯಕ್ಷ ವಿನೋದ್ ಎಂ. ಚವ್ಹಾಣ ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಯೋಧರಿಗೆ ಗೌರವ ಸನ್ಮಾನ ಮಾಡಲಾಯಿತು. ಇತ್ತೀಚಿಗೆ ಮೈಸೂರು ವಿವಿಯಿಂದ 16 ಚಿನ್ನದ ಪದಕ ಪಡೆದ ಪೂಜಾ ನಲವಡೆ ಅವರಿಗೆ ಗೌರವ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರದಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು. ಅಂದು ಬೆಳಗ್ಗೆ ನಗರದ ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಸಂಜೆ 4 ಗಂಟೆಗೆ ಭವ್ಯ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳ ಝೇಂಕಾರದೊಂದಿಗೆ ಅದ್ಧೂರಿಯಾಗಿ ನಡೆಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಪ್ರಕಾಶ್ ರಾವ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವಾಜಿರಾವ್.ಎಂ ಸೇರಿದಂತೆ ಮರಾಠ ಸಮಾಜದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.