ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ್ದ ಶಿವಾಜಿ: ತಹಶೀಲ್ದಾರ ಹೊರಪೇಟೆ

| Published : Feb 20 2024, 01:51 AM IST

ಸಾರಾಂಶ

ಹಿಂದೂ ಮಂದಿರಗಳ ಮೇಲಿನ ನಿರಂತರ ದಾಳಿ ಖಂಡಿಸಿ ಶಿವಾಜಿಯ ನಿರಂತರ ಹೋರಾಟದ ಫಲವಾಗಿ ಶಿಲ್ಪಕಲೆ ಉಳಿದಿದೆ.

ಕನಕಗಿರಿ: ಭಾರತವನ್ನು ಹಿಂದೂ ಸಾಮ್ರಾಜ್ಯವನ್ನಾಗಿಸಲು ಛತ್ರಪತಿ ಶಿವಾಜಿ ಮಹಾರಾಜರು ಬಾಲ್ಯದಿಂದಲೂ ದಿಟ್ಟ ಹೋರಾಟ ನಡೆಸಿದ್ದರು ಎಂದು ತಹಶೀಲ್ದಾರ ವಿ.ಎಚ್. ಹೊರಪೇಟೆ ಹೇಳಿದರು.ಇಲ್ಲಿನ ತಹಶೀಲ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಶಿವಾಜಿ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸೋಮವಾರ ಮಾತನಾಡಿದರು.ಹಿಂದೂ ಮಂದಿರಗಳ ಮೇಲಿನ ನಿರಂತರ ದಾಳಿ ಖಂಡಿಸಿ ಶಿವಾಜಿಯ ನಿರಂತರ ಹೋರಾಟದ ಫಲವಾಗಿ ಶಿಲ್ಪಕಲೆ ಉಳಿದಿದೆ. ಎಷ್ಟೋ ಜನ ಶಿವಾಜಿಯ ಹೋರಾಟದಿಂದ ಪ್ರಾಣ ಉಳಿಯುವಂತಾಯಿತು. ಇಂತಹ ಹೋರಾಟಗಾರರು ತತ್ವಾದರ್ಶಗಳು ನಾವೆಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.ನಂತರ ಮರಾಠ ಸಮಾಜದ ಮುಖಂಡ ಅಂಬಣ್ಣ ಮಹಿಪತಿ ಮಾತನಾಡಿ, ಶಿವಾಜಿ ಹಿಂದೂವೀ ಸ್ವರಾಜ್ ಘೋಷಿಸಿಕೊಂಡು ಸ್ವಾಭಿಮಾನ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ್ದರು. ಇವರ ಶೌರ್ಯ, ಸಾಹಸಕ್ಕೆ, ಪರಾಕ್ರಮಕ್ಕೆ ಮತ್ತೊಂದು ಹೆಸರೇ ಶಿವಾಜಿ. ಇಂತಹ ದಿಟ್ಟ ಹೋರಾಟಗಾರನ ಹೋರಾಟ ಅಜರಾಮರ ಎಂದು ತಿಳಿಸಿದರು.ಪ್ರಮುಖರಾದ ಹನುಮಂತ ದುಮ್ಮಾಳ, ಹನುಮಂತಪ್ಪ ರಾಟಿ, ದೊಡ್ಡ ನಾಗರಾಜ, ಮಿನೋಜಿರಾವ್ ಆರೇರ್, ಸುರೇಶ ವಾಲೇಕಾರ್ ಸೇರಿದಂತೆ ತಹಶೀಲ್ ಕಚೇರಿ ಸಿಬ್ಬಂದಿ ಇದ್ದರು.ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಶಾಲಾ-ಕಾಲೇಜುಗಳಲ್ಲಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಶಿವಾಜಿ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಇಲ್ಲಿನ ಗಂಗಾವತಿ ರಸ್ತೆಯಲ್ಲಿನ ಶಿವಾಜಿ ವೃತ್ತಕ್ಕೂ ಕ್ಷತ್ರಿಯ ಸಮಾಜದಿಂದ ಪೂಜೆಸಲ್ಲಿಸಿ, ಘೋಷಣೆಗಳನ್ನು ಕೂಗಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.