ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬೇರು-ಚಿಗುರು ಯೋಜನೆ ಸಹಕಾರಿ: ಶಾಸಕ ಮಾನೆ

| Published : Feb 20 2024, 01:51 AM IST

ಸಾರಾಂಶ

ಸ್ಥಳೀಯರ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವ ಪರಿಕಲ್ಪನೆ ಕಳೆದ 2 ವರ್ಷಗಳ ಹಿಂದೆ ಹಾನಗಲ್ ತಾಲೂಕಿನಲ್ಲಿ ಚಾಲನೆ ಪಡೆದು ಯಶಸ್ವಿಯಾಗಿ ನಡೆದಿದೆ.

50 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‌ ಅಳವಡಿಕೆ ಸಮಾರಂಭ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ರಾಜ್ಯ ಸರ್ಕಾರ ಬೇರು-ಚಿಗುರು ಎಂಬ ಶೈಕ್ಷಣಿಕ ಉನ್ನತಿಯ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಸರ್ಕಾರ ಮಾತ್ರವಲ್ಲ ಸ್ಥಳೀಯರ ಸಹಭಾಗಿತ್ವದಲ್ಲಿ ಶಾಲೆಗಳ ಸುಧಾರಣೆ ಅತ್ಯಂತ ಯಶಸ್ವಿಯಾಗಿ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನ ಗುರುಭವನದಲ್ಲಿರುವ ಹ್ಯುಮಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಹಾನಗಲ್ಲ ತಾಲೂಕಿನ 50 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‌ ಅಳವಡಿಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯರ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವ ಪರಿಕಲ್ಪನೆ ಕಳೆದ 2 ವರ್ಷಗಳ ಹಿಂದೆ ಹಾನಗಲ್ ತಾಲೂಕಿನಲ್ಲಿ ಚಾಲನೆ ಪಡೆದು ಯಶಸ್ವಿಯಾಗಿ ನಡೆದಿದೆ. ಅದೇ ಈಗ ಬೇರು-ಚಿಗುರು ಯೋಜನೆಯಾಗಿ ರಾಜ್ಯಮಟ್ಟದಲ್ಲಿ ಚಾಲನೆ ಪಡೆಯುತ್ತಿರುವುದು ಖುಷಿ ತಂದಿದೆ ಎಂದ ಅವರು, ಶಿಕ್ಷಣಕ್ಕೆ ಹೊಸ ಚೈತನ್ಯ ನೀಡಬೇಕಿದೆ. ಹಳ್ಳಿಯ ಮಕ್ಕಳಿಗೆ ಸ್ಮಾರ್ಟ್ ಶಿಕ್ಷಣ ನೀಡಿದರೆ ಈ ಮಕ್ಕಳ ಪ್ರತಿಭೆ ಜಾಗತಿಕ ಮಟ್ಟದಲ್ಲಿ ಬೆಳಗಬಲ್ಲದಾಗಿದೆ. ಮೊದಲ ಹಂತದಲ್ಲಿ ತಾಲೂಕಿನ 50 ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಇದರಿಂದ 10 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ದಾನಿಗಳು, ವಿವಿಧ ಸಂಸ್ಥೆಗಳ ಸಹಭಾಗಿತ್ವ ಪಡೆದು ಇಂತಹ ಶೈಕ್ಷಣಿಕ ಸೌಲಭ್ಯಗಳನ್ನು ಈ ಹಳ್ಳಿಯ ಮಕ್ಕಳಿಗೆ ನೀಡುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿ. ಎಲ್ಲರೂ ಸೇರಿ ಹಾನಗಲ್ ತಾಲೂಕನ್ನು ಶೈಕ್ಷಣಿಕ ಉನ್ನತ ಸ್ಥಾನದಲ್ಲಿ ನೋಡುವ ಸೌಭಾಗ್ಯಕ್ಕೆ ಸಾಕ್ಷಿಯಾಗೋಣ ಎಂದರು.

ಮುಖ್ಯ ಅತಿಥಿ, ಇಂಡಿಯಾ 41 ಕ್ಲಬ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಸರಸ್ವತುಲಾ ಮಾತನಾಡಿ, ಇಂದಿನ ಮಕ್ಕಳೇ ದೇಶದ ಭವಿಷ್ಯದ ಬುನಾದಿ. ಅವರ ಭವಿಷ್ಯ ರೂಪಿಸುವುದೆಂದರೆ ದೇಶವನ್ನು ಸದೃಢ ಮಾಡಿದಂತೆ. ರಾಜ್ಯದಲ್ಲಿ 10 ಲಕ್ಷ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಿ ಡಿಜಿಟಲ್ ಶಿಕ್ಷಣ ನೀಡುವ ಗುರಿ ನಮ್ಮದಾಗಿದೆ. ಮುಕ್ತ ಶಿಕ್ಷಣವೂ ಈಗ ಬೇಕಾಗಿದೆ. ಶಿಕ್ಷಣ ಉದ್ಯೋಗಕ್ಕೆ ಸಹಕಾರಿಯಾಗಿರಬೇಕು ಎಂದ ಅವರು, ಇಡೀ ಭಾರತದಲ್ಲಿ 50 ಸರ್ಕಾರಿ ಶಾಲೆಗಳು ಏಕಕಾಲಕ್ಕೆ ಸ್ಮಾರ್ಟ್ ಶಾಲೆಗಳಾಗುತ್ತಿರುವುದು ಹಾನಗಲ್‌ನಲ್ಲಿಯೇ ಮೊದಲು ಎಂದು ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರಿನ ಎಕಸೆನ್ ಅಗ್ರಿಸೈನ್ಸ್‌ನ ಚೀಫ್ ಆಪರೇಟಿಂಗ್ ಅಫೀಸರ್ ಅನಿಲ್ ಮಲ್ಲಪ್ಪ ಮಾತನಾಡಿ, ಕಂಪನಿಗಳು ಕೃಷಿಕರಿಂದ ಲಾಭ ಪಡೆದರೆ ಸಾಲದು. ಕೃಷಿ ಸಮುದಾಯಕ್ಕೆ ಲಾಭವಾಗಿಯೂ ಹೊರಹೊಮ್ಮಬೇಕು. ರೈತ ಮಕ್ಕಳಿಗೆ ವಿದ್ಯೆಗಾಗಿ ಬೆಂಬಲಿಸಬೇಕು. ಕೃಷಿಯನ್ನು ಲಾಭದಾಯಕಗೊಳಿಸಬೇಕು. ಅನ್ನದಾತರ ಮಕ್ಕಳಿಗೆ ಆಶ್ರಯ ನೀಡಬೇಕು ಎಂದರು.

ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ಹಾನಗಲ್ ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ಹತ್ತು, ಹಲವು ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರ ಸದುಪಯೋಗಕ್ಕೆ ಎಲ್ಲ ಶಿಕ್ಷಕ ಬಳಗ ಸಜ್ಜಾಗಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಹೀಗೆಯೇ ಮುಂದುವರೆದರೆ ಎರಡು, ಮೂರು ವರ್ಷಗಳಲ್ಲಿ ತಾಲೂಕಿನ ಶೈಕ್ಷಣಿಕ ವ್ಯವಸ್ಥೆ ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದರು.

41 ಕ್ಲಬ್ ರಾಷ್ಟ್ರೀಯ ಕೋಶಾಧ್ಯಕ್ಷ ಮಧುಬಾಬು, ಏರಿಯಾ 10 ಚೇರಮನ್ ಕಿರಣ ಹೆಬಸೂರ, ಎಫ್‌ಟಿಡಿಇ ಏರಿಯಾ ಕನ್ವೇನರ್ ಪರಶುರಾಮ ಶಾಲಗಾರ ಅತಿಥಿಗಳಾಗಿದ್ದರು. ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪುರ ಪ್ರಾಸ್ತಾವಿಕ ಮಾತನಾಡಿದರು. ಸಿದ್ದು ಗೌರಣ್ಣನವರ ಕಾರ್ಯಕ್ರಮ ನಿರೂಪಿಸಿದರು. ಮುರುಗೇಶ ಬಾಳೂರ ವಂದಿಸಿದರು.