ಸಾರಾಂಶ
ಉಡುಪಿ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು ಹಾಗೂ ಛತ್ರಪತಿ ಶಿವಾಜಿ ವಿವಿಧೊದೇಶ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉದ್ಘಾಟಿಸಿ ಶಿವಾಜಿ ಮಹಾರಾಜರ ಆದರ್ಶಗಳ ಬಗ್ಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿಛತ್ರಪತಿ ಶಿವಾಜಿ ಅವರ ಆದರ್ಶ, ಶಿಸ್ತು ಹಾಗೂ ದೇಶಾಭಿಮಾನವನ್ನು ವಿದ್ಯಾರ್ಥಿಗಳು ಮೈಗೊಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕರೆ ನೀಡಿದರು.
ಅವರು ಸೋಮವಾರ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು ಹಾಗೂ ಛತ್ರಪತಿ ಶಿವಾಜಿ ವಿವಿಧೊದೇಶ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ತಾಯಿಯ ಪ್ರೇರಣೆಯಿಂದ ಉತ್ತಮ ವ್ಯಕ್ತಿತ್ವವನ್ನು ಮೈಗೊಡಿಸಿಕೊಂಡ ಶಿವಾಜಿಯು ಸ್ತ್ರೀಯರ ಕುರಿತು ಅಪಾರ ಗೌರವವನ್ನು ಹೊಂದಿದವರಾಗಿದ್ದು, ಇದು ಯುವಜನತೆಗೆ ಮಾದರಿಯಾಗಿದೆ ಎಂದರು.
ಶಿವಾಜಿ ಅವರ ಬಗ್ಗೆ ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಗೆರಿಲ್ಲಾ ಯುದ್ಧಗಳ ಮೂಲಕ ಶತ್ರುಗಳನ್ನು ಸದೆ ಬಡಿದು ತಮ್ಮ ಸೈನ್ಯದ ಸಂಖ್ಯೆಯನ್ನು ಏರಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅತ್ಯಂತ ಮಹತ್ವಕಾಂಕ್ಷಿ ನಾಯಕರಾಗಿದ್ದ ಶಿವಾಜಿ ಡಚ್ಚರು, ಪೋರ್ಚುಗೀಸರು ಮತ್ತು ಫ್ರೆಂಚರ ವಿರುದ್ಧ ಹೋರಾಡುವ ಮೂಲಕ ದೇಶ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಿದರು ಎಂದರು.ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರ್ನಾಟಕ ಕ್ಷತ್ರೀಯ ಮರಾಠ ಸಮುದಾಯ ಅಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿಧೊದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ಸಿ. ನಾಯ್ಕ್ ಮೊರೆ, ಶಾಲೆಯ ಬೋಧಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹೇಶ್ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಇಂದಿರಾ ಬಿ. ವಂದಿಸಿದರು.