ಸಾರಾಂಶ
ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಮುಂಚಿನಂತೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವ ಮೂಲಕ ರೈತರಿಗೆ ಅನುಕೂಲತೆ ಕಲ್ಪಿಸಿಕೊಡಬೇಕು.
ಕಂಪ್ಲಿ: ಬೆಳಗೋಡುಹಾಳ್ ಗ್ರಾಮದ ಹೊಲಗಳ ಲೈನ್‌ಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಕಂಪ್ಲಿಯ ಜೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ವಿನೋದ್ ಬ್ಯಾಲ್ಯಾಳ್ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ತಾಲೂಕಿನ ಬೆಳಗೋಡುಹಾಳ್ ಗ್ರಾಮದ ಹೊಲಗಳಿಗೆ ರಾತ್ರಿ 9ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದಾಗಿ ಜಮೀನುಗಳಿಗೆ ನೀರು ಹಾಯಿಸಲು ತೆರಳಲು ಕಷ್ಟದ ಪರಿಸ್ಥಿತಿ ಬಂದೊದಗಿದೆ. ಅಲ್ಲದೆ, ವಿಷಜಂತುಗಳಿಂದ ಅಪಾಯಕ್ಕೊಳಗಾಗಬಹುದಾಗಿದ್ದು, ರೈತರಲ್ಲಿ ಭಯದ ವಾತಾವರಣ ಉಲ್ಬಣಗೊಂಡಿದೆ. ಹೀಗಾಗಿ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಮುಂಚಿನಂತೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವ ಮೂಲಕ ರೈತರಿಗೆ ಅನುಕೂಲತೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಟಿ. ಗಂಗಣ್ಣ, ಅಧ್ಯಕ್ಷ ಕೆ. ರಮೇಶ, ಸಲಹಾ ಸಮಿತಿ ಸದಸ್ಯ ಕೆ. ಸುದರ್ಶನ, ಸಂಘಟನಾ ಕಾರ್ಯದರ್ಶಿ ಕಡಪ ಅಕ್ಬರ್, ರೈತರಾದ ಎನ್. ಸುಬಾನಿ, ಬಸವರಾಜ, ಎಂ. ಖಾದರ್, ಡಿ. ವೆಂಕಟೇಶ, ಕೆ. ಪರ್ವತಪ್ಪ, ಎನ್. ರಾಮಂಜಿನಿ, ಎನ್. ತಿಮ್ಮಪ್ಪ, ಎ. ನಾಗರಾಜ, ಬಿ. ನಾಗರಾಜ, ಬಿ. ಮಾರುತಿ, ರಾಮಕೃಷ್ಣ ಸೇರಿದಂತೆ ಅನೇಕರಿದ್ದರು.