ಸಮಾಜದಲ್ಲಿ ಮಠ, ಗುರುಗಳ ಪಾತ್ರ ಮಹತ್ವದ್ದು: ಬಿವೈಆರ್‌

| Published : Feb 20 2024, 01:51 AM IST

ಸಾರಾಂಶ

ಸದೃಢ ಸಮಾಜ ನಿರ್ಮಾಣದಲ್ಲಿ ಮಠ ಹಾಗೂ ಗುರುಗಳ ಪಾತ್ರ ಬಹು ಮುಖ್ಯವಾಗಿದೆ. ಸಾಕ್ಷಾತ್ ನಡೆದಾಡುವ ದೈವ ಎಂದು ಅನಾದಿ ಕಾಲದಿಂದ ಗುರುಗಳಿಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ನೀಡಲಾಗಿದೆ. ಇತ್ತೀಚಿನ ವರ್ಷದಲ್ಲಿ ಮಠ, ಗುರುಗಳ ಬಗೆಗಿನ ನಿರ್ಲಕ್ಷ್ಯದಿಂದಾಗಿ ಸಮಾಜ ಅಧಃಪತನದತ್ತ ಸಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಶಿಕಾರಿಪುರ ತಾಲೂಕಿನ ಈಸೂರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸದೃಢ ಸಮಾಜ ನಿರ್ಮಾಣದಲ್ಲಿ ಮಠ ಹಾಗೂ ಗುರುಗಳ ಪಾತ್ರ ಬಹು ಮುಖ್ಯವಾಗಿದೆ. ಸಾಕ್ಷಾತ್ ನಡೆದಾಡುವ ದೈವ ಎಂದು ಅನಾದಿ ಕಾಲದಿಂದ ಗುರುಗಳಿಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ನೀಡಲಾಗಿದೆ. ಇತ್ತೀಚಿನ ವರ್ಷದಲ್ಲಿ ಮಠ, ಗುರುಗಳ ಬಗೆಗಿನ ನಿರ್ಲಕ್ಷ್ಯದಿಂದಾಗಿ ಸಮಾಜ ಅಧಃಪತನದತ್ತ ಸಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಈಸೂರು ಗ್ರಾಮದಲ್ಲಿನ ಶ್ರೀ ಜಗದ್ಗುರು ತೋಂಟದಾರ್ಯ ನಂದೀಶ್ವರ ಮಹಾಸ್ವಾಮಿಗಳ ಮಠದ ನೂತನ ಶ್ರೀ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಅನಾದಿ ಕಾಲದಿಂದ ಶ್ರೀಗಳು ಭಕ್ತರಲ್ಲಿ ಆಚಾರ, ವಿಚಾರ, ಧರ್ಮ ಶಿಕ್ಷಣದ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಮಹಾನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಶಾಂತಿ, ನೆಮ್ಮದಿ ಜತೆಗೆ ಭಗವಂತನಲ್ಲಿ ಭಯ-ಭಕ್ತಿ ಹೆಚ್ಚಲು ಕಾರಣರಾಗಿದ್ದಾರೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಠ ಜೀರ್ಣೋದ್ಧಾರ ಬಹು ಕ್ಲಿಷ್ಟಕರವಾಗಿದೆ. ಅಂದಾಜು 3 ಶತಮಾನದ ಬಹು ಪುರಾತನ ಇತಿಹಾಸ ಹೊಂದಿರುವ ಗ್ರಾಮದ ತೋಂಟದಾರ್ಯ ಮಠ ಗ್ರಾಮಸ್ಥರ ಜತೆಗೆ ಮಠದ ವ್ಯವಸ್ಥಾಪಕ ಜಗದೀಶ್ ಬಡಕಳ್ಳಿ ಅವರ ಅಪಾರ ಶ್ರಮದಿಂದ ಮೂಲ ಸೌಂದರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾಪಾಡಿಕೊಳ್ಳಲಾಗಿದೆ ಎಂದು ಶ್ಲಾಘಿಸಿದರು.

ಎಡೆಯೂರು ಶಾಖಾ ಮಠದ 10ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ನಂದೀಶ್ವರ ಮಹಾಸ್ವಾಮಿ ಅವರಿಂದ ನಿರ್ಮಾಣವಾದ ಮಠ ಅತ್ಯಂತ ಉತ್ಕೃಷ್ಟ ಪರಂಪರೆ ಮೂಲಕ ಪ್ರಸಿದ್ಧವಾಗಿದೆ. ಶ್ರೀಗಳು ಗದುಗಿನ ಅಣ್ಣಿಗೇರಿಯಲ್ಲಿ ಐಕ್ಯವಾದ ನಂತರದಲ್ಲಿ ಶೂನ್ಯವಾದ ಪೀಠಕ್ಕೆ 2025ಕ್ಕೆ 3 ಶತಮಾನ ಪೂರ್ಣಗೊಳ್ಳುವ ಸುಸಂದರ್ಭ ನಾಡಿನ ಎಲ್ಲ ಗುರುಶ್ರೇಷ್ಠರ ಜತೆ ಚರ್ಚಿಸಿ, ಸೂಕ್ತ ಸಮರ್ಥ ಪೀಠಾಧಿಪತಿ ನೇಮಕಕ್ಕೆ ಹೆಚ್ಚು ಗಮನ ನೀಡುವುದಾಗಿ ತಿಳಿಸಿದರು.

ರಾಜ್ಯದ ಮಾಜಿ ಸಹಕಾರ ಹಾಗೂ ಅರಣ್ಯ ಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, ಕಾಯಕ ದಾಸೋಹ ತತ್ವವನ್ನು ಶರಣ ಸಂಸ್ಕೃತಿಯ ಮಠಗಳು ಕಡ್ಡಾಯವಾಗಿ ಪಾಲಿಸುತ್ತಿವೆ. ಅನ್ನ ದಾಸೋಹ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿರುವ ಮಠಗಳು, ನಾಡಿಗೆ ಹಲವು ಶ್ರೇಷ್ಠ ವ್ಯಕ್ತಿಗಳನ್ನು ಪರಿಚಯಿಸಿದೆ ಎಂದ ಅವರು, ಕಲ್ಯಾಣ ಮಂಟಪದ ನಿರ್ಮಾಣಕ್ಕೆ ₹1 ಲಕ್ಷ ವೈಯಕ್ತಿಕ ದೇಣಿಗೆ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಬೆಕ್ಕಿನ ಕಲ್ಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಪ್ರತಿ ಮಠಕ್ಕೆ ಭಕ್ತವರ್ಗ ಬಹುದೊಡ್ಡ ಆಸ್ತಿಯಾಗಿದೆ. ಭಕ್ತರ ಸಂಕಲ್ಪ ಶಕ್ತಿಯಿಂದ ಮಾತ್ರ ಮಠ ಹೆಚ್ಚು ಪ್ರಕಾಶಮಾನವಾಗಲಿದೆ ಎಂದರು.

ಮಠದ ವ್ಯವಸ್ಥಾಪಕ ಜಗದೀಶ್ ಬಡಕಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಯಡಿಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ ಡಾ.ತೋಂಟದ ಸಿದ್ದರಾಮ ಸ್ವಾಮಿಗಳು, ಗದಗ ತೋಂಟದಾರ್ಯ ವಿದ್ಯಾಪೀಠದ ಪ್ರೊ. ಎಸ್.ಎಸ್. ಪಟ್ಟಣ ಶೆಟ್ಟಿ, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಅನುಭಾವಿ ಕೆ.ಜಿ. ಬಸವರಾಜಪ್ಪ, ಗ್ರಾಪಂ ಅಧ್ಯಕ್ಷೆ ರೇಖಾ ಪಾಟೀಲ್, ಧರ್ಮದರ್ಶಿ ಸಮಿತಿ ಅಧ್ಯಕ್ಷ ಧನಂಜಯ, ಯೋಗೇಶ್ವರಪ್ಪ, ಗಣೇಶ್ ಮೇಷ್ಟ್ರು, ವೀರಶೈವ ಸಮಾಜದ ಅಧ್ಯಕ್ಷ ಶಿವಾನಂದಪ್ಪ ಕೆಂಪಳ್ಳಿ ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಪ್ಪ ಪ್ರಾರ್ಥಿಸಿ, ರುದ್ರಪ್ಪಯ್ಯ ಸ್ವಾಗತಿಸಿದರು. ಕುಮಾರಸ್ವಾಮಿ ನಿರೂಪಿಸಿ, ವೀರೇಶ್ ವಂದಿಸಿದರು.

- - - -19ಕೆಎಸ್.ಕೆಪಿ1:

ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಶ್ರೀ ಜಗದ್ಗುರು ತೋಂಟದಾರ್ಯ ನಂದೀಶ್ವರ ಮಹಾಸ್ವಾಮಿಗಳ ಮಠದ ಕಲ್ಯಾಣ ಮಂಟಪಕ್ಕೆ ಸಂಸದ ರಾಘವೇಂದ್ರ ಶಿಲಾನ್ಯಾಸ ನೆರವೇರಿಸಿದರು.