ಸಮಾಜ ಅನಕ್ಷರತೆಯಿಂದ ಬಳಲುತ್ತಿದ್ದನ್ನು ಗಮನಿಸಿದ ಸಿದ್ಧಗಂಗಾ ಮಠದ ಉದ್ದಾನ ಸ್ವಾಮೀಜಿಗಳು ೧೯೧೭ರಲ್ಲಿ ಆರಂಭಿಸಿದ ಅನ್ನ, ಅಕ್ಷರ ಹಾಗೂ ಆಶ್ರಯದ ದಾಸೋಹ ನಿರಂತರ ೧೦೯ ವರ್ಷಗಳಿಂದ ಎಂದು ಅಡಚಣೆಯಾಗದ ರೀತಿ ನಡೆದುಕೊಂಡು ಬರುತ್ತಿದೆ. ಪೂರ್ವಿಕರು ಹಾಕಿಕೊಟ್ಟ ಪಂಕ್ತಿಯಂತೆ ಶಿವಕುಮಾರ ಸ್ವಾಮೀಜಿಗಳು ತಮ್ಮ ೮೯ ವರ್ಷದ ಸುದೀರ್ಘ ಸೇವೆಯಲ್ಲಿ ನಾಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಎಲ್ಲ ಸಮುದಾಯಗಳು ಒಪ್ಪುವ ಹಾಗೂ ಗೌರವಿಸುವ ಏಕೈಕ ಸ್ವಾಮೀಜಿ ಎಂದರೆ ಅದು ಡಾ. ಶಿವಕುಮಾರ ಸ್ವಾಮೀಜಿಗಳು ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ಗುರುವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ವೀರಶೈವ-ಲಿಂಗಾಯಿತ ಯುವ ಸೇನೆ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಏಳನೇ ವರ್ಷದ ಪುಣ್ಯಸ್ಮರಣೆಯಲ್ಲಿ ಆಶೀರ್ವಚನ ನೀಡಿ, ಸಮಾಜ ಅನಕ್ಷರತೆಯಿಂದ ಬಳಲುತ್ತಿದ್ದನ್ನು ಗಮನಿಸಿದ ಸಿದ್ಧಗಂಗಾ ಮಠದ ಉದ್ದಾನ ಸ್ವಾಮೀಜಿಗಳು ೧೯೧೭ರಲ್ಲಿ ಆರಂಭಿಸಿದ ಅನ್ನ, ಅಕ್ಷರ ಹಾಗೂ ಆಶ್ರಯದ ದಾಸೋಹ ನಿರಂತರ ೧೦೯ ವರ್ಷಗಳಿಂದ ಎಂದು ಅಡಚಣೆಯಾಗದ ರೀತಿ ನಡೆದುಕೊಂಡು ಬರುತ್ತಿದೆ. ಪೂರ್ವಿಕರು ಹಾಕಿಕೊಟ್ಟ ಪಂಕ್ತಿಯಂತೆ ಶಿವಕುಮಾರ ಸ್ವಾಮೀಜಿಗಳು ತಮ್ಮ ೮೯ ವರ್ಷದ ಸುದೀರ್ಘ ಸೇವೆಯಲ್ಲಿ ನಾಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಮಠದಲ್ಲಿ ಯಾವುದೇ ಮತ, ಜಾತಿ ಬೇಧವಿಲ್ಲದೆ ೧೦ ಸಾವಿರ ವಿದ್ಯಾರ್ಥಿಗಳು ಇಂದು ಜ್ಞಾನಾರ್ಜನೆ ಪಡೆಯುತ್ತಿದ್ದಾರೆ ಎಂದರು.ಶ್ರೀಗಳು ಪಟ್ಟಣಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಶಾಲೆಗಳನ್ನು ತೆರೆಯುವ ಮೂಲಕ ಹಳ್ಳಿಗಾಡಿನ ಜನರನ್ನು ವಿದ್ಯಾವಂತರನ್ನಾಗಿ ಮಾಡುವ ಮಹದಾಸೆ ಹೊಂದಿದ್ದರು. ಇದರಂತೆ ರಾಜ್ಯದ ಹಲವಡೇ ಗ್ರಾಮೀಣ ಭಾಗದಲ್ಲಿ ಮಠದ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಿರಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ನಾಡುಕಂಡ ನಡೆದಾಡುವ ದೇವರು ಶಿವಕುಮಾರ ಶ್ರೀಗಳು. ಸಂತ ಸ್ವಂತಕ್ಕೆ ಏನನ್ನೂ ಮಾಡಿಕೊಳ್ಳುವುದಿಲ್ಲ, ಎಲ್ಲವೂ ಸಮಾಜಕ್ಕಾಗಿ ಎಂಬುದನ್ನು ಸ್ವಾಮೀಜಿಗಳು ತಿಳಿಸಿದ್ದಾರೆ. ಸ್ವಾಮೀಜಿಗಳು ಹಾಕಿಕೊಟ್ಟ ಪಂಕ್ತಿಯಲ್ಲಿ ನಡೆದಾಗ ಮಾತ್ರ ಆಚರಣೆಗೂ ಒಂದು ಅರ್ಥ ಬರಲಿದೆ ಎಂದರು.ಕಲ್ಲಮಠದ ಶ್ರೀ ಮಹಂತ ಸ್ವಾಮೀಜಿ ಮಾತನಾಡಿ, ನಿಸ್ವಾರ್ಥಸೇವೆಯಿಂದ ಮನುಷ್ಯನು ದೇವರಾಗಬಹುದು ಎಂಬುದಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ಉದಾಹರಣೆ. ಸ್ವಂತಕ್ಕಿಂತ ಸಮಾಜಕ್ಕೆ ನೀಡುವ ಕೊಡುಗೆಯಿಂದ ಸಾವಿನ ನಂತರವು ಬದುಕಬಹುದು ಎಂದರು. ತೆಂಕಲಗೂಡು ಮಠದ ಶ್ರೀ ಚನ್ನಸಿದ್ಧೇಶ್ವರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಪಂಚದಲ್ಲಿ ಜಾತಿ, ತಾರತಮ್ಯ ಅತಿಯಾಗಿದ್ದ ವೇಳೆ ವಿಶ್ವಕ್ಕೆ ಸಮಾನತೆ ಪಾಠ ಹೇಳಿಕೊಟ್ಟ ಪ್ರಥಮ ಧರ್ಮ ವೀರಶೈವ ಧರ್ಮ. ದಯೆಯೇ ವೀರಶೈವ ಧರ್ಮದ ಮೂಲ. ಅನಾದಿ ಕಾಲದಿಂದಲೂ ವೀರಶೈವ-ಲಿಂಗಾಯಿತ ಧರ್ಮ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದೆ. ಸಿದ್ಧಗಂಗಾ ಮಠವಿಲ್ಲದೆ ಇದ್ದಿದ್ದರೆ ಇಂದು ಲಕ್ಷಾಂತರ ಜನರು ಅನಕ್ಷರಸ್ಥರಾಗಿ ಉಳಿಯುತ್ತಿದ್ದರು ಎಂದರು.ಅವಧೂತ ಗೌರಿಗದ್ದೆ ವಿನಯ್ ಗುರೂಜಿ ಮಾತನಾಡಿ, ದಾಸೋಹಕ್ಕೆ ಹೆಸರಾದ ಧರ್ಮ ವೀರಶೈವ ಧರ್ಮ, ದಯೆ, ಸೇವೆ, ಸಮಾನತೆ ತತ್ವಗಳು ಧರ್ಮದಲ್ಲಿ ಅಡಕವಾಗಿದೆ. ನಾಡಿನಲ್ಲಿ ಮಠಗಳು ಒಂದು ಸುಂದರ ಹೂವಿನ ಹಾರದಂತೆ. ಮಠಗಳಿಂದಾಗಿ ನಾಡಿನಲ್ಲಿ ಇಂದಿಗೂ ಸಂಸ್ಕಾರ, ಸಂಸ್ಕೃತಿ ಉಳಿದುಕೊಂಡಿದೆ. ರಾಜ್ಯದಲ್ಲಿರುವ ವೀರಶೈವ ಮಠಗಳು ದಾಸೋಹಕ್ಕೆ ಹೆಸರು ಪಡೆದಿದ್ದು ಮಠಗಳಿರುವವರಗೂ ನಾಡಿಗೆ ಗಂಡಾಂತರ ಬರುವುದಿಲ್ಲ. ಶಿವಕುಮಾರ ಸ್ವಾಮೀಜಿ ಆಶಯದಂತೆ ಸಮಾಜದ ಪ್ರತಿಯೊಬ್ಬರು ಇಷ್ಟಲಿಂಗ ಪೂಜೆ, ನಿಸ್ವಾರ್ಥಕಾಯಕದಲ್ಲಿ ತೊಡಗಿಕೊಂಡಾಗ ಸ್ವಾಮಿಜಿಗಳ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದರು.ಕಾರ್ಯಕ್ರಮದಲ್ಲಿ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಮಾಜಿ ಶಾಸಕರಾದ ಎಚ್. ಕೆ ಕುಮಾರಸ್ವಾಮಿ, ಎಚ್.ಎಂ ವಿಶ್ವನಾಥ್, ವೀರಶೈವ-ಲಿಂಗಾಯಿತ ಯುವ ವೇದಿಕೆ ಅಧ್ಯಕ್ಷ ಜಾನೇಕೆರೆ ಸಾಗರ್, ಮುಖಂಡರಾದ ಬಸವಣ್ಣ, ವಿದ್ಯಾಶಂಕರ್, ಬನ್ನಳ್ಳಿ ಪುನೀತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ೩೮೯ನೇ ರ್‍ಯಾಂಕ್ ಪಡೆದ ತಾಲೂಕಿನ ಗುರ್ಜನಹಳ್ಳಿ ಗ್ರಾಮದ ಮನೋಜ್ ಅವರನ್ನು ಸನ್ಮಾನಿಸಲಾಯಿತು.

===ಫೋಟೋ:೯ ಎಸ್‌ಕೆಪಿಪಿ ೧

ಡಾ. ಶಿವಕುಮಾರ ಸ್ವಾಮೀಜಿಗಳ ೭ನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಈ ವೇಳೆ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಚನ್ನಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.