ಸಾರಾಂಶ
ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಯುತ್ತಿ ದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನವದೆಹಲಿ : ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಎರಡು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ವರ್ಷಾಂತ್ಯಕ್ಕೆ ಪುನಶ್ಚೇತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಇಡೀ ಕಾರ್ಖಾನೆಯನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ. ಸುಮಾರು ₹8000ರಿಂದ 10,000 ಕೋಟಿ ಹೂಡಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಆ ಕಾರ್ಖಾನೆ ಭಾರತೀಯ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್) ಅಧೀನದಲ್ಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರದಲ್ಲಿ ಉಕ್ಕು ಕ್ಷೇತ್ರದಲ್ಲಿ ಪ್ರಾಧಿಕಾರ ಒಂದು ಲಕ್ಷ ಕೋಟಿ ರು. ಮೊತ್ತ ಹೂಡಿಕೆ ಮಾಡಲಿದೆ. ಅದೇ ಸಂದರ್ಭದಲ್ಲಿ ವಿಐಎಸ್‌ಎಲ್ ಕಾರ್ಖಾನೆಯನ್ನು ಕೂಡ ಪುನಶ್ಚೇತನಗೊಳಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು 2030ರ ಹೊತ್ತಿಗೆ ದೇಶೀಯವಾಗಿ ವಾರ್ಷಿಕ 300 ದಶಲಕ್ಷ ಟನ್ ಸ್ಟೀಲ್ ಉತ್ಪಾದನೆ ಗುರಿ ನಿಗದಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸರಕಾರಿ ಸ್ವಾಮ್ಯದಲ್ಲಿರುವ ಉಕ್ಕು ಸ್ಥಾವರಗಳನ್ನು ಬಲಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ಹೆಮ್ಮೆಯ ಕಾರ್ಖಾನೆ
- ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು 1923ರಲ್ಲಿ ಸ್ಥಾಪನೆ ಮಾಡಲಾಗಿತ್ತು
- ನಾಲ್ವಡಿ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ವಿಶ್ವೇಶ್ವರಯ್ಯ ಕಂಪನಿ ಸ್ಥಾಪಿಸಿದ್ದರು
- ಈ ಕಂಪನಿಯಿಂದಾಗಿ ಭದ್ರಾವತಿಗೆ ಉಕ್ಕಿನ ನಗರಿ ಎಂಬ ಹೆಸರು ಕೂಡ ಪ್ರಾಪ್ತವಾಗಿತ್ತು
- ಭದ್ರಾವತಿ, ಶಿವಮೊಗ್ಗ ಭಾಗದಲ್ಲಿ ಸಹಸ್ರಾರು ಮಂದಿಗೆ ಉದ್ಯೋಗ ನೀಡಿತ್ತು ಈ ಕಂಪನಿ
- ಹಲವು ವರ್ಷಗಳ ಕಾಲ ಈ ಕಂಪನಿ ನಷ್ಟಕ್ಕೆ ಈಡಾಗಿತ್ತು. ಮಾರಾಟಕ್ಕೂ ಯತ್ನ ನಡೆದಿತ್ತು
2 ತಿಂಗಳಲ್ಲಿ ಡಿಪಿಆರ್
ಭದ್ರಾವತಿಯ ವಿಎಸ್‌ಐಎಲ್ ಪುನಶ್ಚೇತನಕ್ಕೆ ಪ್ರಯತ್ನ ನಡೆಯುತ್ತಿದೆ. 2 ತಿಂಗಳಲ್ಲಿ ಡಿಪಿಆರ್ ಸಿದ್ಧವಾಗಲಿದೆ. ವರ್ಷಾಂತ್ಯಕ್ಕೆ ಪುನಶ್ಚೇತನ ಯೋಜನೆ ಜಾರಿಗೆ ಬರಲಿದೆ. 8ರಿಂದ 10 ಸಾವಿರ ಕೋಟಿ ರು. ಹೂಡಿಕೆಗೆ ಚಿಂತನೆ ನಡೆದಿದೆ. ಇಡೀ ಕಾರ್ಖಾನೆಯನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರೇ ಇದಕ್ಕೆ ಅಡಿಗಲ್ಲು ಹಾಕಲಿದ್ದಾರೆ.
- ಎಚ್.ಡಿ.ಕುಮಾರಸ್ವಾಮಿ, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))