ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬಸವಣ್ಣನವರು ಒಂದೇ ಬದುಕಿನಲ್ಲಿ ಹಲವು ಬಾಳು ಕಂಡವರು. ಕನ್ನಡ ಸಂಸ್ಕೃತಿಯನ್ನು ಕಟ್ಟಿದವರಲ್ಲಿ ಮುಖ್ಯರು ಎಂದು ಜೆಎಸ್ಎಸ್ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಮಹೇಂದ್ರ ಮೂರ್ತಿ ದೇವನೂರು ಅಭಿಪ್ರಾಯಪಟ್ಟರು.ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಮಠದಲ್ಲಿ ನಡೆದ ಶಿವಾನುಭವ ಗೋಷ್ಠಿಯಲ್ಲಿ ಬಸವಣ್ಣನವರ ಜೀವನ ಮತ್ತು ಸಾಧನೆ ಕುರಿತು ಮಾತನಾಡುತ್ತಾ, ಬಸವಣ್ಣನವರು ಯುಗದ ಉತ್ಸಾಹ, ಸುಖದ ಸಮುದ್ರದಂತೆ ಇದ್ದವರು. ಕನ್ನಡ ನಾಡು-ನುಡಿಗೆ ಸಮಸ್ಯೆ ಬಂದಾಗಲೆಲ್ಲ ನಮಗೆ ಬಸವಣ್ಣನವರಲ್ಲಿ ಪರಿಹಾರ ಸಿಗುತ್ತದೆ. ನಮಗೆ ಅರಿವಾಗದಂತೆ ಬೆಳೆಸುವ ಗುಣ ,ವ್ಯಕ್ತಿತ್ವ ಬಸವಣ್ಣನವರ ಸಾಹಿತ್ಯದಲ್ಲಿ ಇದೆ ಎಂದರು.ದೇಶಕ್ಕೆ ಹೇಗೆ ಸಂವಿಧಾನವಿದಿಯೋ ಹಾಗೆ ದೇಹಕ್ಕೆ ಒಂದು ಸಂವಿಧಾನವನ್ನು ಕೊಟ್ಟರು. ಭಕ್ತಿ ಚಳುವಳಿಯಲ್ಲಿ ವೈಚಾರಿಕತೆಯನ್ನು ಕಾಣಿಸಿದ ಮಹಾ ಧೀಮಂತ ಬಸವಣ್ಣನವರು. ಜನಪ್ರಿಯತೆ ಮತ್ತು ಶ್ರೇಷ್ಠತೆ ಎರಡು ಅವರಲ್ಲಿತ್ತು. ಚೆನ್ನಾಗಿ ಮತ್ತು ಸರಿಯಾಗಿ ಮಾತನಾಡುತ್ತಿದ್ದ ಮತ್ತು ಬದುಕಿದ ಬಸವಣ್ಣನವರು ನಮ್ಮೆಲ್ಲರಿಗೂ ದಾರಿದೀಪ. ಜ್ಞಾನದ ಮೂಲಕ ಪದವಿ ಪಡೆದರು. ಏಕಾಂತ ಮತ್ತು ಲೋಕಾಂತಗಳನ್ನು ಸಮನ್ವಯಿಸಿ ಬದುಕಿದ್ದಾಗಿ ಅವರು ಹೇಳಿದರು.ಏಕಾ ದೇವೋಪಾಸನೆ ಕಾಯಕ ಪ್ರಜ್ಞೆ, ದೇವಾಲಯ ನಿರಾಕರಣೆ, ದಾಸೋಹಂ ಪರಿಕಲ್ಪನೆ, ನಡೆ-ನುಡಿ ಏಕತ್ರ, ಗುರು, ಲಿಂಗ, ಜಂಗಮ, ಪ್ರಸಾದಗಳ ಮಹತ್ವ, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಸರ್ವೋದಯ, ಜಾತ್ಯಾತೀತ ನಿಲುವು, ವೈಚಾರಿಕ ಪ್ರಜ್ಞೆ, ದಯವೇ ಧರ್ಮದ ಮೂಲ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಬಸವಣ್ಣನವರು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.ತಮ್ಮ ವಚನಗಳ ಮೂಲಕ ಕನ್ನಡ ಸಾಹಿತ್ಯವನ್ನು ಹೊಸ ದಿಕ್ಕಿಗೆ ಹೊರಳಿಸಿದ ಮಹಾ ವಚನಕಾರ ಬಸವಣ್ಣ. ಸಾಮಾನ್ಯರ ವಸ್ತುವನ್ನು ಮತ್ತು ಭಾಷೆಯನ್ನು ಬಳಸಿ ವಿಶೇಷ ಶೈಲಿ ನಿರೂಪಣೆ ತಂತ್ರಗಳ ಮೂಲಕ ಕನ್ನಡ ಸಾಹಿತ್ಯವನ್ನು ವಿಶಿಷ್ಟ ರೀತಿಯಲ್ಲಿ ದಾಖಲಿಸಿದರು. ಕನ್ನಡ ಸಾಹಿತ್ಯದ ಮೇರು ವಚನಕಾರ ಎಂದು ಬಣ್ಣಿಸಿದರು.ಮೂಡುಗೂರು ಮಠದ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ, ಬಸವ ಪತ್ರಿಕೆಯ ಸಂಪಾದಕ ಶಿವರುದ್ರಪ್ಪ, ಬಸಪ್ಪ ದೇವರು, ಕಾ.ಸು. ನಂಜಪ್ಪ ಇದ್ದರು.