ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
೧೨ನೇ ಶತಮಾನದ ಶಿವಶರಣೆ ನೀಲಮ್ಮನವರು ವಚನಗಾರ್ತಿಯರಲ್ಲಿ ಪ್ರಮುಖರಾಗಿದ್ದು ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ನೀಡಬೇಕಾದ ಸ್ಥಾನವನ್ನು ಸಮರ್ಪಕವಾಗಿ ವಚನಗಳಲ್ಲಿ ಅಭಿವ್ಯಕ್ತಿಗೊಳಿಸಿರುವುದರಿಂದ ಇವರ ವಚನಗಳು ಎಂದಿಗೂ ಪ್ರಸ್ತುತವಾಗಿರುತ್ತವೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಎಲ್.ಎಂ. ವೆಂಕಟೇಶ್ ತಿಳಿಸಿದರು.ನಗರದ ಪಲ್ಲಾಗಟ್ಟಿ ಅಡೆವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ವಚನಗಾರ್ತಿ ನೀಲಮ್ಮನ ಸಾಮಾಜಿಕ ಪ್ರಜ್ಞೆ ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲಾ ಶರಣರಿಗೂ ಮಹಾತಾಯಿಯಂತೆ ಇದ್ದ ನೀಲಮ್ಮನವರು ಅರಮನೆಯಲ್ಲಿ ಬೆಳೆದವರು ಬಸವಣ್ಣನವರಂತೆ ಸರಳತೆಯ ಬದುಕನ್ನು ಕಂಡುಕೊಂಡಿದ್ದರು. ಇವರ ವಚನಗಳಲ್ಲಿ ಸಮಾನತೆ, ಲಿಂಗ ತಾರತಮ್ಯ, ದಾಸೋಹದ ಪರಿಕಲ್ಪನೆ ಮುಂತಾದ ವಿಚಾರಗಳಿಗೆ ಒತ್ತು ಕೊಟ್ಟು ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಎಚ್ಚರಿಸಿದ್ದರು. ಸ್ತ್ರೀ ಸಮಾನತೆಯನ್ನು ತಮ್ಮ ವಚನಗಳಲ್ಲಿ ಪ್ರಸ್ತುತಪಡಿಸಿ ಸಾಮರಸ್ಯ ಸಮಾನತೆ ಧಾರ್ಮಿಕತೆ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ವಚನಗಳನ್ನು ರಚಿಸಿದ್ದರು. ಬಹುಮುಖ್ಯವಾಗಿ ಹುಟ್ಟು ಸಾವುಗಳ ನಡುವಿನ ಸಾಮರಸ್ಯತೆಯನ್ನು ವಚನಗಳಲ್ಲಿ ಪ್ರಸ್ತುತಪಡಿಸಿದ್ದರು. ಶರಣರ ತತ್ವಗಳನ್ನು ಪ್ರತಿಪಾದಿಸಿ ಶರಣರ ಸಿದ್ದಾಂತವನ್ನು ಅನುಷ್ಠಾನಗೊಳಿಸಿದ ಕೀರ್ತಿ ನೀಲಮ್ಮ ನವರಿಗೆ ಸಲ್ಲುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ವಿಜಯಕುಮಾರಿ ಮಾತನಾಡಿ ಹನ್ನೆರಡನೆ ಶತಮಾನದ ಕಾಲಘಟ್ಟದ ಶರಣರು ಕೇವಲ ಒಂದು ಜಾತಿ ಮತ ಧರ್ಮಕ್ಕೆ ಸೀಮಿತವಾಗದೆ ಕಾಯಕ ನಿಷ್ಠೆ ಆದರ್ಶಗಳಿಂದ ಸರ್ವ ಸಮಾನ ಸಮಾಜ ಕಟ್ಟಿ ಅನುಭವ ಮಂಟಪದ ಮುಖಾಂತರ ಸಾವಿರಾರು ವಚನಗಳನ್ನ ರಚಿಸಿ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಶರಣರ ವಚನಗಳು ವಿಶ್ವದಾದ್ಯಂತ ಮಾನ್ಯತೆ ಪಡೆದಿವೆ. ಆದ್ದರಿಂದ ಜೀವನಕ್ಕೆ ಬೇಕಾಗಿರುವ ಮೌಲ್ಯಗಳು ವಚನ ಸಾಹಿತ್ಯದಲ್ಲಿದ್ದು, ಆದ್ದರಿಂದ ವಿದ್ಯಾರ್ಥಿಗಳು ಶಿವ ಶರಣರ ವಚನಗಳನ್ನು ಅಭ್ಯಾಸ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನದ ಜೊತೆಗೆ ಉತ್ತಮ ಸಮಾಜವನ್ನೂ ನಿರ್ಮಾಣ ಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಪ್ರೊ. ರೇಣುಕಾ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಲೋಕೇಶ್ವರಯ್ಯ, ಪ್ರೊ. ಸತೀಶ್ ಚಂದ್ರ, ವಿಶ್ವನಾಥ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.