ಅರಸೀಕೆರೆಯ ಕೋಡಿಮಠದಲ್ಲಿ ಶಿವಲಿಂಗ ಮಹಾಸ್ವಾಮಿ ಸ್ಮರಣೆ: ವಿಶೇಷ ಪೂಜೆ

| Published : May 28 2024, 01:05 AM IST

ಅರಸೀಕೆರೆಯ ಕೋಡಿಮಠದಲ್ಲಿ ಶಿವಲಿಂಗ ಮಹಾಸ್ವಾಮಿ ಸ್ಮರಣೆ: ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗೈಕ್ಯ ಶಿವಲಿಂಗ ಮಹಾಸ್ವಾಮಿಗಳ 137ನೇ ವರ್ಷದ ಸ್ಮರಣಾರಾಧನೆ ಅರಸೀಕೆರೆಯ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಕಳೆದ ಐದು ದಿನಗಳಿಂದ ವಿಶೇಷ ಪೂಜಾ ಕೈಕರ್ಯಗಳು ಭಕ್ತರ ಶ್ರದ್ಧಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.

137ನೇ ವರ್ಷದ ಆರಾಧನೆ । ಹಾರನಹಳ್ಳಿಯಲ್ಲಿ ಐದು ದಿನಗಳ ಉತ್ಸವ । ಧಾರ್ಮಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಲಿಂಗೈಕ್ಯ ಶಿವಲಿಂಗ ಮಹಾಸ್ವಾಮಿಗಳ 137ನೇ ವರ್ಷದ ಸ್ಮರಣಾರಾಧನೆ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಕಳೆದ ಐದು ದಿನಗಳಿಂದ ವಿಶೇಷ ಪೂಜಾ ಕೈಕರ್ಯಗಳು ಭಕ್ತರ ಶ್ರದ್ಧಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.

ಸ್ಮರಣಾರಾಧನೆಯ ಐದನೇ ದಿನ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ನಾನಾ ಮಠಾಧೀಶರು ಪಾಲ್ಗೊಂಡರೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರುವ ಮೂಲಕ ಗುರುವಿನ ಆರಾಧನೆಯಲ್ಲಿ ಪಾಲ್ಗೊಂಡು ಪುನೀತರಾದರು. ಮುಂಜಾನೆ ಮಠದ ಆವರಣದಲ್ಲಿರುವ ಶಿವಲಿಂಗಜ್ಜಯ್ಯನವರ ಗದ್ದುಗೆಗೆ ನಾನಾ ಅಭಿಷೇಕಗಳು, ಬಿಲ್ವಾರ್ಚನೆ ಸೇರಿದಂತೆ ವಿವಿಧ ಬಗೆಯ ಅರ್ಚನೆಗಳು ವಿಧಿವತ್ತಾಗಿ ನಡೆದ ಬಳಿಕ ಉತ್ಸವ ನಡೆಯಿತು.

ಬಳಿಕ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಬೃಹತ್ ಧಾರ್ಮಿಕ ಸಮಾರಂಭದಲ್ಲಿ ತೊಗರ್ಸಿ ಮಳೆ ಮಠದ ಮಹಾಂತ ದೇಶಿ ಕೇಂದ್ರ ಸ್ವಾಮೀಜಿ, ಚನ್ನಗಿರಿ ತಾಲೂಕು ಹಾಲಸ್ವಾಮಿ, ವಿರಕ್ತಮಠದ ಬಸವ ಜಯಚಂದ್ರ ಸ್ವಾಮೀಜಿ, ತೊಗರ್ಸಿ ಪಂಚವನ್ನಿಗೆ ಮಠದ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರ ಶೇಖರ ಸ್ವಾಮೀಜಿ, ಹಾನಗಲ್ ಅಕ್ಕಿಅಲೂರು ವಿರಕ್ತ ಮಠದ ಶಿವ ಬಸವ ಸ್ವಾಮೀಜಿ, ಮಾಡಾಳು ನಿರಂಜನ ರುದ್ರಮಿನಿ ಸ್ವಾಮೀಜಿ, ಮೂರು ಕಳಸ ಮಠದ ಜ್ಞಾನಪ್ರಭು ಸಿದ್ದರಾಮ ದೇಶಿ ಕೇಂದ್ರ ಸ್ವಾಮೀಜಿ, ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಭಕ್ತರಿಗೆ ಆಶೀರ್ವಚನ ನೀಡಿದರು.

ಕೋಡಿಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶೀವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಗುರು ಪರಂಪರೆಯ ಮೇಲೆ ನಂಬಿಕೆ ಇಟ್ಟು ಗುರುವಿನ ಮೂಲಕ ಧೈವವನ್ನ ಕಾಣುವ ನಮ್ಮ ಸಂಸ್ಕೃತಿ ಆಚಾರ ವಿಚಾರಕ್ಕೆ ಅದರದ್ದೇ ಆದ ಮಹತ್ವವಿದೆ. ಹರ ಮುನಿದರೂ ಗುರು ಕಾಯುವನು ಎಂಬ ನಂಬಿಕೆಯೇ ಶಿಷ್ಯ ಕುಲವನ್ನು ಕೈಹಿಡಿದು ನಡೆಸುತ್ತಿದೆ. ಗುರುವಿನ ಅನುಗ್ರಹ ಹಾಗೂ ಮಾರ್ಗದರ್ಶನವಿಲ್ಲದೆ ಯಾರ ಬದುಕೂ ಪೂರ್ಣವಾಗುವುದಿಲ್ಲ. ಹಾಗಾಗಿಯೇ ಮುಂದೆ ಗುರಿ ಹಿಂದೆ ಗುರು ಬದುಕಿನಲ್ಲಿ ಯಾರು ಹೊಂದಿರುತ್ತಾರೋ ಅವರ ಬದುಕು ಇತರರಿಗೆ ಮಾದರಿಯಾಗಿರುತ್ತದೆ. ಗುರು ಶಿಷ್ಯರ ಸಂಬಂಧ ದೈವ ಸಂಭಂದ’ ಎಂದು ಹೇಳಿದರು.

ಭಕ್ತ ದೈವದ ಅಧೀನ, ದೈವ ಭಕ್ತರ ಅಧೀನ. ಅದೇ ರೀತಿ ಮಠ ಮಂದಿರಗಳು, ಭಕ್ತರ ಆಸ್ತಿಯಾದರೆ ಭಕ್ತರು ಮಠದ ಆಸ್ತಿ ಇದ್ದಂತೆ. ಯಾವುದೇ ಮಠ ಮಂದಿರದ ಗುರು ಜಾತಿ, ಮತ, ಧರ್ಮ ಬಡವ, ಮೇಲು, ಕೀಳು ನೋಡದೆ ಎಲ್ಲಾ ಭಕ್ತರನ್ನು ಒಪ್ಪಿ ಅಪ್ಪಿಕೊಳ್ಳುತ್ತಾನೆ. ಆ ಮೂಲಕ ಭಕ್ತರ ಒಳಿತಿಗೆ ಮಾರ್ಗದರ್ಶನ ನೀಡುವ ಮಹತ್ತರ ಜವಾಬ್ದಾರಿ ಮಠಾಧೀಷರ ಮೇಲಿದೆ ಎಂದು ಕಿವಿಮಾತು ಹೇಳಿದರು.

ಗೋಣಿಬೀಡು ಶೀ ಸಂಪಾದನ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ, ಜಾತಿ ಮತ ನೋಡದೆ ಸರ್ವ ಸಮುದಾಯದವರು ಒಂದೆಡೆ ಸೇರಿ ಕೋಡಿಮಠದ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಕೋಡಿಮಠ ಎಂದರೆ ಧಾರ್ಮಿಕತೆಯೊಂದಿಗೆ ಸಾಮರಸ್ಯ ಗಟ್ಟಿಗೊಳಿಸುವ ಕ್ಷೇತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧಾರ್ಮಿಕ ಸಮಾರಂಭದ ಬಳಿಕ ನೆರೆದಿದ್ದ ಭಕ್ತ ಸಮೂಹಕ್ಕೆ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ಮತ್ತಿತರ ಗಣ್ಯರು ಇದ್ದರು.