ಸಂಡೂರಿನ ಶಿವಪುರ ಕೆರೆ ಈಗ ಖಾಲಿ ಖಾಲಿ

| Published : May 24 2024, 12:48 AM IST

ಸಾರಾಂಶ

ಶಾಸಕ ಈ.ತುಕಾರಾಂ ಪರಿಶ್ರಮದ ಫಲವಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಈ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.

ವಿ.ಎಂ. ನಾಗಭೂಷಣ

ಸಂಡೂರು: ಕಳೆದ ವರ್ಷ ಮಳೆ ಕೊರತೆಯಿಂದ ಪಟ್ಟಣದ ಶಿವಪುರ ಕೆರೆಯಲ್ಲಿ ಜಲಕ್ಷಾಮ ಉಂಟಾಗಿ ಈಗ ನೀರಿನ ಮಟ್ಟ ತಳ ಕಂಡಿದೆ.

ಇಲ್ಲಿನ ಶಿವಪುರ ಕೆರೆ ಸಂಡೂರಿಗರಿಗೆ ಬಹುಪಯೋಗಿ. ಈ ಕೆರೆ ಪಟ್ಟಣದ ಮೇಲ್ಮಟ್ಟದಲ್ಲಿ ಇರುವ ಕಾರಣ ಈ ಕೆರೆ ತುಂಬಿತೆಂದರೆ ಅಂತರ್ಜಲದ ಪ್ರಮಾಣ ಹೆಚ್ಚಿ ಸಂಡೂರು, ಲಕ್ಷ್ಮೀಪುರ, ಕೃಷ್ಣಾನಗರ ಹಾಗೂ ದೌಲತ್‌ಪುರದ ಕೊಳವೆಬಾವಿಗಳು ಚೈತನ್ಯ ಪಡೆದುಕೊಳ್ಳುತ್ತವೆ. ಇದರಿಂದ ಗೃಹ ಬಳಕೆ ಹಾಗೂ ಕೃಷಿಗೂ ಯಥೇಚ್ಛವಾಗಿ ನೀರು ದೊರೆಕಲಿದೆ.

ವಾಕಿಂಗ್ ಸ್ಪಾಟ್:

ಶಾಸಕ ಈ.ತುಕಾರಾಂ ಪರಿಶ್ರಮದ ಫಲವಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಈ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಕೆರೆಯ ಸುತ್ತಲಿನ ಗುಡ್ಡಬೆಟ್ಟಗಳಿಂದ ಹರಿದು ಬರುವ ನೀರಿಗೆ ಅಡ್ಡಲಾಗಿ ಚೆಕ್‌ಡ್ಯಾಂ ನಿರ್ಮಿಸಿ, ಅಲ್ಲಿಂದ ಪೈಪ್‌ಲೈನ್ ಮೂಲಕ ಕೆರೆಗೆ ನೀರನ್ನು ಹರಿಸಲಾಗುತ್ತದೆ. ಹಿಂದಿನ ವರ್ಷ ಮಳೆ ಕೊರತೆಯಿಂದ ಈ ಕೆರೆ ಜಲ ಕ್ಷಾಮವನ್ನು ಅನುಭವಿಸುವಂತಾಗಿದೆ. ಕೆರೆಯ ಏರಿಯನ್ನು ಭದ್ರಗೊಳಿಸಿ, ಅದರ ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ವಾಕಿಂಗ್ ಮಾಡುವವರು, ಕೆರೆಯ ವೀಕ್ಷಣೆಗೆ ಆಗಮಿಸುವವರು ವಿಶ್ರಮಿಸಲು ಕೆರೆಯ ಏರಿಯ ಮೇಲೆ ಅಲ್ಲಲ್ಲಿ ಕಲ್ಲಿನ ಆಸನಗಳನ್ನು ಅಳವಡಿಸಲಾಗಿದೆ. ಇದನ್ನೊಂದು ಆಕರ್ಷಣೀಯ ಸ್ಥಳವಾಗಿಸುವ ಪ್ರಕ್ರಿಯೆ ನಡೆದಿದೆ.

ಹಿಂದಿನ ವರ್ಷ ಉಂಟಾದ ಮಳೆ ಕೊರತೆಯಿಂದ ಶಿವಪುರ ಕೆರೆಯಲ್ಲಿ ಜಲ ಕ್ಷಾಮ ಉಂಟಾಗಿದೆ. ಈ ವರ್ಷ ಮುಂಗಾರು ಪೂರ್ವದಲ್ಲಿಯೇ ಮಳೆ ಜಿನುಗುತ್ತಿದೆ. ಶಿವಪುರ ಕೆರೆ ಪುನಃ ಮಳೆ ನೀರಿನಿಂದ ಮೈದುಂಬಿಕೊಳ್ಳಲಿದೆ. ಸಂಡೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲದ ಮಟ್ಟ ಹೆಚ್ಚಲಿದೆ ಎಂಬ ಆಶಾಭಾವನೆ ಜನರಲ್ಲಿ ಮನೆ ಮಾಡಿದೆ. ವರುಣ ದೇವ ಕೃಪೆ ತೋರಬೇಕಿದೆ.

ಶಿವಪುರ ಕೆರೆ ತುಂಬಿದರೆ ಸಂಡೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಲಿದೆ. ಕೊಳವೆ ಬಾವಿಗಳು ಚೈತನ್ಯ ಪಡೆದುಕೊಳ್ಳಲಿವೆ. ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಇರುವುದಿಲ್ಲ. ಕೆರೆ ತುಂಬಿದಾಗ ಸಂಡೂರು ಸುತ್ತಮುತ್ತ ೪೦-೫೦ ಅಡಿಗೆ ಕೊರೆಸಿದರೆ ಸಾಕು ಕೊಳವೆಬಾವಿಯಲ್ಲಿ ನೀರು ಸಿಗುತ್ತದೆ ಎನ್ನುತ್ತಾರೆ ರೈತ ಮುಖಂಡ ಎಂ.ಎಲ್.ಕೆ. ನಾಯ್ಡು.

ಹಿಂದಿನ ವರ್ಷ ಮಳೆ ಕೊರತೆಯಿಂದ ಕೆರೆಯಲ್ಲಿ ನೀರು ತಳಕಂಡಿರುವ ಕಾರಣ ಸಂಡೂರು ಸುತ್ತಮುತ್ತ ಅಂತರ್ಜಲದ ಪ್ರಮಾಣ ಕುಂಠಿತವಾಗಿದೆ. ಹಲವು ಕೊಳವೆಬಾವಿಗಳು ಸ್ಥಗಿತಗೊಂಡಿವೆ. ಈಗ ಅಂತರ್ಜಲ ಪಡೆಯಲು ೨೦೦-೩೦೦ ಅಡಿಗೂ ಹೆಚ್ಚು ಆಳಕ್ಕೆ ಕೊಳವೆಬಾವಿ ಕೊರೆಸಬೇಕಾಗಿದೆ. ಈ ಕೆರೆಗೆ ತುಂಗಭದ್ರಾ ನದಿ ನೀರನ್ನು ತುಂಬಿಸಿದರೆ ಬಹಳ ಅನುಕೂಲವಾಗಲಿದೆ ಎನ್ನುತ್ತಾರೆ ರೈತ ಮುಖಂಡ ವಿ.ಜೆ. ಶ್ರೀಪಾದಸ್ವಾಮಿ.