ಶಿವಶಂಕರ ಪಾರ್ಕ್‌: ಉದ್ಯಾನದಲ್ಲಿ ಬೆಳೆದ ಜಾಲಿಕಂಠಿ ತೆರವು

| Published : Aug 17 2024, 12:58 AM IST

ಸಾರಾಂಶ

ಕನ್ನಡಪ್ರಭ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರು ಹಾಗೂ ಪಾಲಿಕೆ ಆಯುಕ್ತ ಡಾ. ಈಶ್ವರ ಉಳಾಗಡ್ಡಿ ಮೊದಲ ಹಂತದಲ್ಲಿ ಉದ್ಯಾನವನ ಸ್ವಚ್ಛಗೊಳಿಸಿದ್ದಾರೆ. ಜತೆಗೆ ಉದ್ಯಾನವನದ ಅಭಿವೃದ್ಧಿಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹುಬ್ಬಳ್ಳಿ:

ಭೈರಿದೇವರಕೊಪ್ಪದಿಂದ ಗಾಮನಗಟ್ಟಿಗೆ ಸಂಪರ್ಕಿಸುವ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಬರುವ ಶಿವಶಂಕರ ಪಾರ್ಕ್‌ (ಮಾಯಕಾರ ಲೇಔಟ್‌)ನ ಉದ್ಯಾನವನದಲ್ಲಿ ಆಳೆತ್ತರದಲ್ಲಿ ಬೆಳೆದು ನಿಂತ ಜಾಲಿಕಂಠಿಗಳನ್ನು ಮಹಾನಗರ ಪಾಲಿಕೆ ಕೊನೆಗೂ ತೆರವುಗೊಳಿಸುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ.

ಶಿವಶಂಕರ ಪಾರ್ಕ್‌ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿ ಎಂಟು ವರ್ಷಗಳಾದರೂ ಈ ವರೆಗೂ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ಇದರಿಂದ ಉದ್ಯಾನವನಲ್ಲಿ ಜಾಲಿ ಕಂಠಿಗಳು ಬೆಳೆದರೆ, ರಸ್ತೆಯ ಇಕ್ಕೆಲಗಳಲ್ಲಿ ಕಸ ಬೆಳೆ ನಿಂತಿತ್ತು. ಈ ಕುರಿತು ಕನ್ನಡಪ್ರಭ ಜು. 28ರಂದು ''''''''ಶಿವಶಂಕರ ಪಾರ್ಕ್‌ಗೆ ಶಿವನೇ ಗತಿ'''''''' ಎಂಬ ವರದಿ ಪ್ರಕಟಿಸಿತ್ತು.

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರು ಹಾಗೂ ಪಾಲಿಕೆ ಆಯುಕ್ತ ಡಾ. ಈಶ್ವರ ಉಳಾಗಡ್ಡಿ ಮೊದಲ ಹಂತದಲ್ಲಿ ಉದ್ಯಾನವನ ಸ್ವಚ್ಛಗೊಳಿಸಿದ್ದಾರೆ. ಜತೆಗೆ ಉದ್ಯಾನವನದ ಅಭಿವೃದ್ಧಿಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರೊಂದಿಗೆ ಶಿವಶಂಕರ ಪಾರ್ಕ್‌ನಲ್ಲಿ ಬೀದಿದೀಪ, ರಸ್ತೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಭರವಸೆಯನ್ನು ನೀಡಿದ್ದಾರೆ.ಕನ್ನಡಪ್ರಭದಲ್ಲಿ ವರದಿ ಬಂದ ಕೂಡಲೇ ಪಾಲಿಕೆ ಆಯುಕ್ತರು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಪಾರ್ಕಿನಲ್ಲಿರುವ ಕಂಠಿ ಸ್ವಚ್ಛಗೊಳಿಸಿದ್ದಾರೆ. ಆದಷ್ಟು ಶೀಘ್ರವೇ ಪಾರ್ಕಿನ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲು ಸೂಚನೆ ನೀಡುವೆ. ಬೀದಿದೀಪಗಳ ಕುರಿತು ಪಾಲಿಕೆ, ಹೆಸ್ಕಾಂ ಅವರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಪಾರ್ಕಿನ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು ಅದರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಬೀದಿದೀಪಗಳಿಗೆ ವಿದ್ಯುತ್ ಸಂಪರ್ಕವಿಲ್ಲದಿರುವುದು ಗಮನಕ್ಕೆ ಬಂದಿದೆ. ಶೀಘ್ರವೇ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ ಹೇಳಿದರು.