ಸಾರಾಂಶ
ಕಸ್ತೂರಿ ರಂಗನ್ ವರದಿಯ ಬಗ್ಗೆ ಅರಣ್ಯಮಂತ್ರಿ ಖಂಡ್ರೆ ಅವರ ಜೊತೆ ಚರ್ಚೆ ಮಾಡಿ ಸರ್ಕಾರ ನಿರ್ಧಾರಕ್ಕೆ ಬಂದಿದೆ. ನೀತಿ ಸಂಹಿತೆ ಇರುವುದರಿಂದ ಈಗ ಯಾವುದೇ ಭರವಸೆಯನ್ನು ನೀಡುವುದಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮೂಡ ಹಗರಣದ ದಾಖಲೆಗಳನ್ನು ಕಾಂಗ್ರೆಸ್ ನಾಯಕರು ಸುಟ್ಟು ಹಾಕಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶೋಭಾ ಕರಂದ್ಲಾಜೆ ಅವರ ಬಗ್ಗೆ ಮಹಿಳೆಯಾಗಿ ವೈಯಕ್ತಿಕವಾಗಿ ನನಗೆ ಗೌರವ ಇದೆ. ಆದರೆ ಶೋಭಾ ಯಾವಾಗಲೂ ಉರಿವ ಬೆಂಕಿಗೆ ತುಪ್ಪ ಸುರಿಯುತ್ತಾರೆ. ಅದಕ್ಕೆ ಹೀಗೆಲ್ಲಾ ಮಾತನಾಡುತಿದ್ದಾರೆ ಎಂದು ಹೇಳಿದರು.ಅವರು ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಾ ಮೇಲೆ ರಾಜಕೀಯ ಪ್ರೇರಿತವಾಗಿ ಇಡಿ ರೈಡ್ ನಡೆಯುತ್ತಿದೆ. ರಾಜಭವನ, ರಾಜ್ಯಪಾಲರು ಬಿಜೆಪಿಯ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಸ್ತೂರಿ ರಂಗನ್ ವರದಿಯ ಬಗ್ಗೆ ಅರಣ್ಯಮಂತ್ರಿ ಖಂಡ್ರೆ ಅವರ ಜೊತೆ ಚರ್ಚೆ ಮಾಡಿ ಸರ್ಕಾರ ನಿರ್ಧಾರಕ್ಕೆ ಬಂದಿದೆ. ನೀತಿ ಸಂಹಿತೆ ಇರುವುದರಿಂದ ಈಗ ಯಾವುದೇ ಭರವಸೆಯನ್ನು ನೀಡುವುದಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್ ಸರ್ಕಾರ ಕರಾವಳಿಗೆ ಅನ್ಯಾಯ ಮಾಡಿದೆ, ಕರಾವಳಿಗೆ ಬಿಡಿಗಾಸು ಅನುದಾನ ನೀಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಸಚಿವೆ ಹೆಬ್ಬಾಳ್ಕರ್, ಬಿಜೆಪಿ ನಾಯಕರು ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಧನಿಯೆತ್ತಿಲ್ಲ ಯಾಕೆ ? ರಾಜ್ಯದ ಬಿಜೆಪಿ ಸಂಸದರು ಏನು ಮಾಡ್ತಿದ್ದಾರೆ ? ದಾರಿ ತಪ್ಪಿಸಿ ಗೂಬೆ ಕೂರಿಸೋ ಕೆಲಸ ಬಿಡಿ. ಬಿಜೆಪಿಗೆ ಆಪಾದನೆ ಮಾಡೋದು ಬಿಟ್ಟು ಬೇರೇನು ಗೊತ್ತಿಲ್ಲ ಎಂದು ಕಿಡಿ ಕಾರಿದರು.