ಸಾರಾಂಶ
ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಉದ್ಘಾಟಿಸಿದ್ದ ಹಾಗೂ ಗಾಂಧಿವಾದಿ ಎಚ್.ನರಸಿಂಹಯ್ಯ ಅವರು ಪರೀಕ್ಷೆ ಬರೆದಿದ್ದ ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಭಾಗದ ಪ್ರೌಢಶಾಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಶಿಕ್ಷಕರ ಕೊರತೆ ಕಾಡುತ್ತಿದೆ.
-ಪ್ರತಿಭಟನೆ ಎಚ್ಚರಿಕೆ
-40 ಹುದ್ದೆಗಳಲ್ಲಿ 18 ಹುದ್ದೆ ಖಾಲಿ! -ವಿದ್ಯಾರ್ಥಿಗಳ ದಾಖಲಾತಿಯಲ್ಲೂ ಭಾರಿ ಕುಸಿತ- ಅಧಿಕಾರಿಗಳಿಗೆ ನಗರಸಭಾ ಸದಸ್ಯ ಮನವಿ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಲೋಕಸೇವಾ ನಿರತ ಡಿ.ಕೊಂಗಾಡಿಯಪ್ಪ ಅವರ ಒತ್ತಾಸೆಯಿಂದ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಉದ್ಘಾಟಿಸಿದ್ದ ಹಾಗೂ ಗಾಂಧಿವಾದಿ ಎಚ್.ನರಸಿಂಹಯ್ಯ ಅವರು ಪರೀಕ್ಷೆ ಬರೆದಿದ್ದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಭಾಗದ ಪ್ರೌಢಶಾಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಶಿಕ್ಷಕರ ಕೊರತೆ ಕಾಡುತ್ತಿದೆ.
ಪ್ರಸಕ್ತ ವರ್ಷವೂ ಸಮಸ್ಯೆ ಮುಂದುವರೆದಿದ್ದು, ಶಾಲೆ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ, ಪಠ್ಯ ಚಟುವಟಿಕೆ ಆರಂಭವಾಗದೆ ವಿದ್ಯಾರ್ಥಿಗಳು ಕಣ್ಣೀರಿಡುವಂತಾಗಿದೆ. ತಕ್ಷಣ ಶಿಕ್ಷಕರ ಹಾಗೂ ಬೋಧಕೇತರ ಸಿಬ್ಬಂದಿಯ ಕೊರತೆ ನೀಗಿಸಬೇಕು ಎಂದು ಶಿಕ್ಷಣ ಇಲಾಖೆಯ ರಾಜ್ಯ ಜಂಟಿ ನಿರ್ದೇಶಕಿ ವಿಜಯ ಈ.ರವಿಕುಮಾರ್ ಅವರಿಗೆ ನಗರಸಭೆ ಸದಸ್ಯ ವಿ.ಎಸ್.ರವಿಕುಮಾರ್ ಮನವಿ ಸಲ್ಲಿಸಿದ್ದಾರೆ.40ರಲ್ಲಿ 18 ಹುದ್ದೆ ಖಾಲಿ:
ಸ್ವಾತಂತ್ರ್ಯಪೂರ್ವದಿಂದ ಇರುವ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ 635 ಜನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿ 40 ಹುದ್ದೆಗಳು ಇವೆ. ಆದರೆ ಕರ್ತವ್ಯ ನಿರ್ವಹಿಸುತ್ತಿರುವವ ಸಂಖ್ಯೆ ಮಾತ್ರ 22. ಸದ್ಯ 18 ಖಾಲಿ ಹುದ್ದೆಗಳು ಇವೆ. ಅಲ್ಲದೆ ಶಾಲೆಯಲ್ಲಿ 7 ‘ಡಿ’ ಗ್ರೂಪ್ ಹುದ್ದೆಗಳು ಖಾಲಿ ಇದ್ದು ಶಿಕ್ಷಕರೇ ಎಲ್ಲಾ ಕೆಲಸಗಳನ್ನು ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. 2023-24ನೇ ಸಾಲಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಇದ್ದ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಈ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿ ಕುಸಿತವಾಗಿ 635ಕ್ಕೆ ತಲುಪಿದೆ ಎಂದು ರವಿಕುಮಾರ್ ಮಾಹಿತಿ ನೀಡಿದರು.ಇಂಗ್ಲಿಷ್ ಶಿಕ್ಷಕರಿಲ್ಲ:
ಶಿಕ್ಷಕರ ಕೊರತೆ ನಡುವೆ ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕರಾಗಿರುವ ರಾಜೇಶ್ ರಾಮಪ್ಪ ಯಡಹಳ್ಳಿ ಅವರು ಸುಮಾರು ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಶಿಕ್ಷಕರ ಕೊರತೆ ಉಂಟಾಗಿದೆ. ನಗರ ಪ್ರದೇಶದಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಸ್ಥಿತಿಯೇ ಹೀಗಾದರೆ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಕೇಳುವವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.ಪ್ರತಿಭಟನೆ ಎಚ್ಚರಿಕೆ:
ನಗರದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಇಂಗ್ಲಿಷ್ ಶಿಕ್ಷಕರ ನೇಮಕ, ಬೋಧಕೇತರ ಸಿಬ್ಬಂದಿ ಕೊರತೆ ನೀಗಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳವರೆಗೂ ವಾಸ್ತವ ಸ್ಥಿತಿಯನ್ನು ವಿವರಿಸಿ ಮನವಿ ಸಲ್ಲಿಸಲಾಗಿದೆ. ಶಾಲೆಯ ಮುಂದೆ ಪೋಷಕರು ಹಾಗೂ ಸಮಾನ ಮನಸ್ಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.