ಸಾರಾಂಶ
ಶರಣು ಸೊಲಗಿ ಮುಂಡರಗಿ
ಒಂದು ಕಾಲದಲ್ಲಿ ಉದ್ಯೋಗ ಕೇಳಿಕೊಂಡು ಮನೆ ಮನೆಗಳಿಗೆ ಬರುವುದನ್ನು ನಾವು ಕಂಡಿದ್ದೇವೆ. 10 ಜನ ಕೆಲಸಕ್ಕೆ ಬರಬೇಕೆಂದು ಹೇಳಿದರೆ ಮಕ್ಕಳು ಸೇರಿದಂತೆ 15 ರಿಂದ 20 ಜನ ಬರುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಕೆಲಸಕ್ಕೆ ಕರೆದರೂ ಕಾರ್ಮಿಕರ ಕೊರತೆ ಎದ್ದು ಕಾಣುತ್ತಿದೆ ಎನ್ನುವುದು ನಿತ್ಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತಾಗಿದೆ.ಇತ್ತೀಚಿನ ವರ್ಷಗಳಲ್ಲಿ ರೈತರ ಜಮೀನುಗಳಲ್ಲಿ ಕೆಲಸ ಮಾಡುವುದಕ್ಕಂತೂ ಕಾರ್ಮಿಕರೇ ಸಿಗುತ್ತಿಲ್ಲ. ಅನೇಕ ಜನ ಯುವಕರು ಹೊಲಗದ್ದೆಗಳ ಕೆಲಸ ಮಾಡಲು ಹಿಂದೇಟು ಹಾಕುವ ಮೂಲಕ ದೂರದ ಚಿಕ್ಕಮಗಳೂರು, ಬೆಂಗಳೂರು, ಮಂಗಳೂರು, ಗೋವಾಗಳತ್ತ ಮುಖ ಮಾಡಿ ಅಲ್ಲಿ ವಿವಿಧ ಕಚೇರಿಗಳ ಕೆಲಸಕ್ಕೋ, ಕಾರ್ಖಾನೆಗಳಲ್ಲಿಯೋ ಕೆಲಸ ಹುಡುಕಿಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ.
ಗ್ರಾಮ ಮಟ್ಟದಲ್ಲಿಯೇ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾರ್ಯಕ್ರಮ ನಡೆಯುತ್ತಿದ್ದು, ಅದರಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳು ಜರುಗುತ್ತಿದ್ದು, ಪ್ರತಿ ಕುಟುಂಬಕ್ಕೂ ವಿವಿಧ ರೀತಿಯ ಉದ್ಯೋಗಗಳು ದೊರೆಯುತ್ತದೆ. ಇನ್ನು ಕೆಲವರು ಮತ್ತೊಬ್ಬರ ಹತ್ತಿರ ಎಲ್ಲಿ ದುಡಿಯುವುದು ನಾವೇ ಸ್ವಂತ ಉದ್ಯೋಗ ಮಾಡೋಣ ಎಂದು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿರುವುದುವುದೂ ಸಹ ಸ್ಥಳೀಯವಾಗಿ ಕಾರ್ಮಿಕರ ಕೊರತೆಗೆ ಕಾರಣವಾಗಿದೆ.ಇತ್ತೀಚಿನ ವರ್ಷಗಳಲ್ಲಿ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ದೂರದ ಉರುಗಳಿಂದ ವಾಹನ ಸೌಲಭ್ಯ ನೀಡಿ ಹೆಚ್ಚಿನ ಕೂಲಿ ಕೊಟ್ಟು ಕರೆದುಕೊಂಡು ಬರುವ ಅನಿವಾರ್ಯತೆ ಒದಗಿ ಬಂದಿದೆ. ಕಾರ್ಮಿಕರ ಕೊರತೆ ಕೇವಲ ರೈತರಿಗೆ ಮಾತ್ರವಲ್ಲ, ಪಟ್ಟಣ ಪ್ರದೇಶದಲ್ಲಿನ ದಿನಸಿ, ಕಿರಾಣಿ ಅಂಗಡಿ, ಬೇಕರಿ, ಬಟ್ಟೆ ಅಂಗಡಿ, ಪಂಚರ್ ಅಂಗಡಿ, ಸ್ಟೇಶನರಿ ಅಂಗಡಿ, ಮಾಲ್, ಮಾರ್ಟ್, ಸಿಮೆಂಟ್, ಕಬ್ಬಿಣ, ಎಲೆಕ್ಟ್ರಿಕಲ್ ಅಂಗಡಿ, ಹೊಟೇಲ್, ಪೆಟ್ರೋಲ್ ಬಂಕ್, ಕಟ್ಟಡ ಕಾರ್ಮಿಕರ ಕೈಯಲ್ಲಿ ಕಾರ್ಯ ನಿರ್ವಹಿಸುವವರು ಸೇರಿದಂತೆ ಎಲ್ಲೆಡೆ ಕಾರ್ಮಿಕರ ಕೊರತೆ ಇರುವುದು ಕಂಡು ಬರುತ್ತಿದೆ.
ಈ ಹಿಂದೆ ನಿತ್ಯವೂ ಬೆಳಗಿನ ಜಾವ ಮನೆ ಮನೆಗೆ ದಿನ ಪತ್ರಿಕೆ ಹಾಕಲು ಮಕ್ಕಳು, ವಿದ್ಯಾರ್ಥಿಗಳು ನಾ ಮುಂದೆ, ತಾ ಮುಂದೆ ಎಂದು ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆ ವಿತರಣೆಗೂ ಸಹ ಹಾಕರ್ಸ್ ಗಳ ಕೊರತೆಯುಂಟಾಗಿದೆ. ಈ ರೀತಿ ಇರುವ ಕಾರ್ಮಿಕರ ಕೊರತೆಗೆ ಬೇಸತ್ತಿರುವ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಪ್ರಗತಿಪರ ರೈತ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಹಂಚಿನಾಳ, ತಮ್ಮ ವಾಹನಕ್ಕೆ ಸಮರ್ಥ ಕೃಷಿ ಕಾರ್ಮಿಕರು ಬೇಕಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡಲು ಹಾಗೂ ಟ್ರ್ಯಾಕ್ಟರ್ ಚಾಲನೆ ಮಾಡಲು, ಹೊಲದಲ್ಲಿನ ಬೆಳೆಗಳಿಗೆ ನೀರು ಹಾಯಿಸಲು, ಆಕಳುಗಳನ್ನು ಜೋಪಾನ ಮಾಡಲು ಸಮರ್ಥ ಕಾರ್ಮಿಕರು ಬೇಕಾಗಿದ್ದಾರೆ ಎಂದು ನಾಮಫಲಕ ಹಾಕಿಕೊಂಡು ಓಡಾಡುತ್ತಿದ್ದಾರೆ.ನನ್ನದು 40 ಎಕರೆ ದಾಳಿಂಬೆ, 30 ಎಕರೆ ಗೋಡಂಬಿ, 10 ಎಕರೆಯಲ್ಲಿ ಅಡಕೆ ಇದೆ. ಜಮೀನಿನಲ್ಲಿ ತೆಂಗಿನ ಮರಗಳಿವೆ, 18 ರಿಂದ 20 ಆಕಳುಗಳಿವೆ.ಇವುಗಳ ನಿರ್ವಹಣೆ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಸ್ವಂತಕ್ಕೆ 4 ಟ್ರ್ಯಾಕ್ಟರ್ ಗಳಿದ್ದು, ಒಂದಕ್ಕೂ ಚಾಲಕರಿಲ್ಲ. ಹೀಗಾಗಿ ಕೃಷಿ ಮಾಡುವುದು ದುಸ್ತರವಾಗಿದೆ. ಹೀಗಾಗಿ ಯಾರಾದರೂ ಸಿಗಬಹುದೆಂದು ನನ್ನ ವಾಹನಕ್ಕೆ ಈ ಬೋರ್ಡು ಹಾಕಿಕೊಂಡು ಹೊರಟಿರುವೆ ಎಂದು ಪ್ರಗತಿಪರ ರೈತ ನಾಗರಹಳ್ಳಿ ಈಶ್ವರಪ್ಪ ಹಂಚಿನಾಳ ಹೇಳಿದರು.