ಲಿಬರ್ಟಿ ಪ್ರತಿಮೆಗಿಂತ ಬಸವ ಪುತ್ಥಳಿ ಚಿಕ್ಕದಿರಬೇಕೇ?

| Published : Jan 14 2024, 01:37 AM IST / Updated: Jan 14 2024, 01:10 PM IST

ಲಿಬರ್ಟಿ ಪ್ರತಿಮೆಗಿಂತ ಬಸವ ಪುತ್ಥಳಿ ಚಿಕ್ಕದಿರಬೇಕೇ?
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಬಸವಕೇಂದ್ರ ಮುರುಘಾಮಠ ವತಿಯಿಂದ ನಿರ್ಮಿಸಲಾಗುತ್ತಿರುವ ಬಸವ ಪುತ್ಥಳಿ ವಿಚಾರದಲ್ಲಿ ಮಕ್ಕಳಾಟಿಕೆಗಿಂತಲೂ ಹಗುರ ತೀರ್ಮಾನ ಕೈಗೊಳ್ಳಲಾಗಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಸಮುದ್ರ ತೀರದಲ್ಲಿ ಪುಟ್ಟ ಮಕ್ಕಳು ಮರಳಿನಲ್ಲಿ ಮನೆ ಕಟ್ಟುವ, ನಿನಗಿಂತ ದೊಡ್ಡ ಮನೆ ಕಟ್ಟುತ್ತೇನೆ ಎಂದು ಕೆಲವೊಮ್ಮೆ ಜಗಳವಾಡಿಕೊಂಡು ಕಟ್ಟಿದ ಮರಳಿನ ಮನೆ ಅಳಿಸಿ ಮತ್ತೊಂದು ನಿರ್ಮಿಸಲು ಮುಂದಾಗುವ ಆಟ ಎಲ್ಲರಿಗೂ ನೆನಪಿರಲಿಕ್ಕೇ ಬೇಕು. ಮರಳಲ್ಲಿ ಮನೆ ಕಟ್ಟುವ ತೀರ್ಮಾನ ಮಾಡುವಾಗ ಮಕ್ಕಳು ಸಾಧ್ಯತೆ ಬಗ್ಗೆ ಯೋಚಿಸಿಯೇ ಜಗಳಕ್ಕಿಳಿಯುತ್ತಾರೆ. ಇದು ಆ ಕ್ಷಣದ ಹಠವೇ ವಿನಹ ಮುಂದುವರಿಯುವುದಿಲ್ಲ. ಮಕ್ಕಳು ಪೋಷಕರೊಟ್ಟಿಗೆ ಸಮುದ್ರ ತೀರ ತೊರೆದಾಗ ಎಂದಿನಂತೆ ಮೂಡ್ ಬದಲಿಸುತ್ತಾರೆ.

ಚಿತ್ರದುರ್ಗ ಬಸವಕೇಂದ್ರ ಮುರುಘಾಮಠ ವತಿಯಿಂದ ನಿರ್ಮಿಸಲಾಗುತ್ತಿರುವ ಬಸವ ಪುತ್ಥಳಿ ವಿಚಾರದಲ್ಲಿ ಮಕ್ಕಳಾಟಿಕೆಗಿಂತಲೂ ಹಗುರ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿಮೆ ನಿರ್ಮಾಣ ಸಾಹಸದ ಕೆಲಸ ಎಂದು ಸ್ವೀಕರಿಸದೆ ಚಿಟಕಿ ಹೊಡೆಯುವಷ್ಟೇ ಸುಲಭ ಎಂದು ಮುರುಘಾಮಠ ಭಾವಿಸಿದಂತಿದೆ. 

ಎನಗಿಂತ ಕಿರಿಯನಿಲ್ಲ, ಶಿವಭಕ್ತನಿಗಿಂತ ಹಿರಿಯನಿಲ್ಲವೆಂಬ ಬಸವಣ್ಣನ ವಚನದ ಆಶಯಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳಲಾಗಿದೆ. ಎನಗಿಂತ ಹಿರಿಯನಿಲ್ಲವೆಂಬ ಸೋಂಕನ್ನು ಬಸವ ಪ್ರತಿಮೆಗೆ ಅಂಟಿಸಲಾಗಿದೆ. ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಮುರುಘಾಮಠದ ಹಿತೈಷಿಯೊಬ್ಬರು ನೀಡಿದ ಸಲಹೆ ಪುತ್ಥಳಿ ನಿರ್ಮಾಣದ ಆಶಯವನ್ನೇ ಮಕಾಡೆ ಮಲಗಿಸಿದ ಸಂಗತಿ ಈಗಲು ಭಕ್ತರ ಮನದಲ್ಲಿ ಸುಳಿದಾಡುತ್ತಿವೆ.

ಯಡಿಯೂರಪ್ಪ ಅವರು ಮೊದಲ ಬಾರಿಗೆ ಸಿಎಂ ಆದಾಗ ಮುರುಘಾಮಠದಿಂದ ಸುಮಾರು 30 ಕೋಟಿ ರುಪಾಯಿ ವೆಚ್ಚದ 100 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಷಟ್ ಸ್ಥಲ (ಸ್ಟಾರ್ ) ಆಕಾರದ ಪೀಠದ ಕೆಲಸ ಭರದಿಂದ ಸಾಗಿತ್ತು. 

ಕಂಚಿನ ಪುತ್ಥಳಿ ಸ್ಥಾಪಿಸಬೇಕೆನ್ನುವ ಧಾವಂತ ಮಠಕ್ಕಿತ್ತು. ಇದೇ ವೇಳೆಗೆ ಅಮೇರಿಕಾಗೆ ನೂರು ಮಂದಿ ಭಕ್ತರನ್ನು ಕರೆದೊಯ್ಯುವ ಸಣ್ಣ ದೊಂದು ಪ್ಯಾಕೇಜ್ ಟೂರನ್ನು ಮುರುಘಾಮಠ ಆರಂಭಿಸಿ ಪ್ರಯಾಣ ಬೆಳೆಸಿತು. 

ಅಮೇರಿಕಾದ ನ್ಯೂಯಾರ್ಕ್ ನಲ್ಲಿರುವ ಲಿಬರ್ಟಿ ಪ್ರತಿಮೆ ನೋಡುತ್ತಿದ್ದಂತೆ ಭಕ್ತ ಮಹಾಶಯರೊಬ್ಬರು ವ್ಹಾ..! ಮಾರ್ವಲೆಸ್ ಎಂಬ ಉದ್ಘಾರ ತೆಗೆದಿದ್ದಾರೆ. ಅದೆಷ್ಟು ಸುಂದರ, ಎತ್ತರದ ಪ್ರತಿಮೆ, ನೋಡಲು ಅಕರ್ಷಣೀಯವಾಗಿದೆ. ನಮ್ಮ ಬಸವಣ್ಣ ಯಾರಿಗಿಂತ ಕಡಿಮೆ ಹೇಳಿ. ಲಿಬರ್ಟಿ ಪ್ರತಿಮೆಗಿಂತಲೂ ಎತ್ತರದ್ದು ನಿರ್ಮಿಸೋಣವೆಂದಿದ್ದಾರೆ. ಹೌದಲ್ವೆ ಎಂದು ಪೀಠಾಧಿಪತಿಗಳು ಸಮ್ಮತಿಸಿದ್ದಾರೆ. 

100 ರಿಂದ 323 ಅಡಿಗೆ ಜಿಗಿಯಿತು ಪ್ರತಿಮೆ: 100 ಅಡಿ ಕಂಚಿನ ಪ್ರತಿಮೆಯನ್ನು ಹೇಗೋ ಮುಗಿಸಿ ತನ್ನ ಆಶಯವ ಈಡೇರಿಸಿಕೊಳ್ಳಬಹುದಾಗಿದ್ದ ಮುರುಘಾಮಠ ತನ್ನ ನ್ಯೂಯಾರ್ಕ್ ಪ್ರವಾಸದ ನಂತರ ಕಂಚಿನ ಪುತ್ಥಳಿಗೆ ಬೇರೆಯದೇ ಸ್ವರೂಪ ನೀಡಿತು. ಲಿಬರ್ಟಿಗಿಂತ ಎತ್ತರದಲ್ಲಿ ಬಸವ ಪುತ್ಥಳಿ ಇರಬೇಕೆಂಬ ಹುಳ ತಲೆಯಲ್ಲಿ ಹೊಕ್ಕಿದ್ದರಿಂದ ಹೊಸದಾಗಿ ಪ್ಲಾನ್ ವೊಂದು ಸಿದ್ಧವಾಯ್ತು.

ಎಂಟು ಅಂತಸ್ಥಿನ ಕಟ್ಟಡದ ಮೇಲೆ 210 ಅಡಿ ಎತ್ತರ ಮೂರ್ತಿ ಅಂದರೆ ಒಟ್ಟು ತಳಮಟ್ಟದಿಂದ 323 ಅಡಿಗೆ ನಕಾಶೆ ಅಂತಿಮ ಸ್ವರೂಪ ಪಡೆಯಿತು. ಇದಕ್ಕೆ 280 ಕೋಟಿ ರುಪಾಯಿಯ ಅಂದಾಜಿಸಲಾಗಿತ್ತು. ಇದಲ್ಲದೇ ಇಡೀ ಪ್ರದೇಶವನ್ನು ಪ್ರವಾಸಿ ಕೇಂದ್ರ ವನ್ನಾಗಿಸುವ ಅಂಶವನ್ನು ಅಡಕ ಮಾಡಿ ಒಟ್ಟಾರೆ 850 ಕೋಟಿ ರುಪಾಯಿ ವೆಚ್ಚದ ದೂರದೃಷ್ಟಿಯೂ ಸೇರಿತ್ತು.

ನೂರು ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಾಂಶುಪಾಲ ತೇಜೇಂದ್ರಸಿಂಗ್ ಬೋನಿ ಅವರಿಗೆ ಈ 323 ಅಡಿ ಎತ್ತರದ ಪ್ರತಿಮೆ ಉಸ್ತು ವಾರಿ ವಹಿಸಲಾಯಿತು. 

ಸರ್ಕಾರಿ ಅನುದಾನ ಬಳಸಿಕೊಂಡು ಈಗಾಗಲೇ ನಿರ್ಮಾಣದ ಹಂತದಲ್ಲಿದ್ದ 100 ಅಡಿ ಎತ್ತರದ ಕಂಚಿನ ಪ್ರತಿಮೆ ಪೀಠ ಬದಲಾವಣೆಗೆ ಮುಂದಾಗಲಾಯಿತು. ಕಬ್ಬಿಣವನ್ನು ಕೀಳುವ ನಂತರ ಕಾಂಕ್ರಿಟ್ ಇನ್ ಪೋರ್ಸ್ ಮಾಡುವ ಕೆಲಸ ಕೈಗೆತ್ತಿಕೊಳ್ಳಲಾಯಿತು.

ಯಾವುದೇ ಸರ್ಕಾರಗಳು ಪ್ರತಿಮೆ ಅಥವಾ ಇನ್ನಾವುದೋ ಕಟ್ಟಡ ನಿರ್ಮಿಸಲು ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡುವುದಿಲ್ಲ. ಅದೇನಿದ್ದರೂ ಹೊಂದಾಣಿಕೆ (ಮ್ಯಾಚಿಂಗ್) ಅನುದಾನವಾಗಿರುತ್ತದೆ. 30 ಕೋಟಿ ರುಪಾಯಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣದ ಕಾರ್ಯ ಆರಂಭಿಸಿದ ನಂತರ ಅದನ್ನು ಬದಲಿಸಿದರೆ ಸರ್ಕಾರ ಹೇಗೆ ಅನುದಾನ ನೀಡುತ್ತದೆ. 

ಯಾವ ರೀತಿಯಲ್ಲಿ ಪರಿಷ್ಕೃತ ಪ್ಲಾನ್ ರಾಜ್ಯ ಸರ್ಕಾರದ ಮುಂದೆ ಮಂಡನೆಯಾಯಿತು. ಸರ್ಕಾರ ನಂತರ ಅದ್ಹೇಗೆ 20 ಕೋಟಿ ರುಪಾಯಿ ಮಂಜೂರು ಮಾಡಿತೆಂಬ ಸಂಗತಿಗಳು ಅನುಮಾನ ಮೂಡಿಸಿವೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾದ ಪ್ರಸ್ತಾವನೆ ಹಾಗೂ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಕೆಯ ಅಂಶಗಳು ಎಲ್ಲಿಯೂ ಬಹಿರಂಗವಾಗಿಲ್ಲ. 

ಸ್ವತಹ ಜಿಲ್ಲಾಡಳಿತಕ್ಕೂ ಗೊತ್ತಿಲ್ಲ. ಅಷ್ಟರಮಟ್ಟಿಗೆ ಗೌಪ್ಯತೆ ಕಾಯ್ದುಕೊಂಡು ಬರಲಾಗಿದೆ. ಮುರುಘಾಮಠ ತನ್ನ ಭಕ್ತರನ್ನು ಅಮೇರಿಕಾ ಪ್ರವಾಸಕ್ಕೆ ಕರೆದೊಯ್ಯದಿದ್ದರೆ, ನ್ಯೂಯಾರ್ಕ್ ನ ಲಿಬರ್ಟ್ ಪ್ರತಿಮೆ ನೋಡದಿದ್ದರೆ ಇಷ್ಟೊತ್ತಿಗೆ 100 ಅಡಿ ಕಂಚಿನ ಪ್ರತಿಮೆ ನಿರ್ಮಾಣ ಎಂದಿಗೋ ಮುಗಿದು ಹೋಗಿರುತ್ತಿತ್ತು.