ಸಾರಾಂಶ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬದಲಾವಣೆ ಆಗಲೇಬೇಕು ಎಂದು ಪುನರುಚ್ಚರಿಸಿರುವ ಶಾಸಕ ಯತ್ನಾಳ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾವು ಈಗಾಗಲೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದ್ದೇವೆ.
ಹುಬ್ಬಳ್ಳಿ : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಪ್ಪ (ಯಡಿಯೂರಪ್ಪ)ನ ನಕಲಿ ಸಹಿ ಮಾಡಿ, ರಾಜ್ಯವನ್ನು ಲೂಟಿ ಹೊಡೆದಿಲ್ಲವೇ ಎಂದು ಪ್ರಶ್ನಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ತಮ್ಮ ತಂದೆಯ ನಕಲಿ ಸಹಿ ಮಾಡಿದ ವಿಜಯೇಂದ್ರ ಅವರಿಗೆ ನಾಲಾಯಕ ಅನ್ನದೇ ಸಾಚಾ ಅನ್ನಬೇಕೆ? ಎಂದು ರಮೇಶ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾಕತ್ ಇದ್ದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಎಷ್ಟು ಸಹಿ ಮಾಡಿದ್ದಾರೆ. ಅದರಲ್ಲಿ ನಕಲಿ ಎಷ್ಟು, ಅಸಲಿ ಎಷ್ಟು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂದು ಸವಾಲೆಸೆದರು.
ಮತ್ತೊಂದು ಅವಧಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಮುಂದುವರಿಯುವ ಮೂಲಕ ಇನ್ನೊಂದು ನಕಲಿ ಸಹಿ ಮಾಡಿ ರಾಜ್ಯವನ್ನೇ ಕೊಳ್ಳೆ ಹೊಡೆಯುವ ಆಸೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಬದಲಾಗಲೇಬೇಕು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬದಲಾವಣೆ ಆಗಲೇಬೇಕು ಎಂದು ಪುನರುಚ್ಚರಿಸಿರುವ ಶಾಸಕ ಯತ್ನಾಳ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾವು ಈಗಾಗಲೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದ್ದೇವೆ. ಹೈಕಮಾಂಡ್ ಮಧ್ಯ ಪ್ರವೇಶಿಸಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ನಮ್ಮದೇ ಕೋರ್ ಕಮಿಟಿ ಇದೆ. ಅಲ್ಲಿ ನಾವು ಅಭ್ಯರ್ಥಿಯನ್ನು ತೀರ್ಮಾನ ಮಾಡಿ ಕಣಕ್ಕಿಳಿಸುತ್ತೇವೆ. ರಾಜ್ಯಾಧ್ಯಕ್ಷರ ಚುನಾವಣೆ ನಮ್ಮ ಟೀಂನಿಂದ ಏನೇನು ತಯಾರಿ ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಂಡಿದ್ದೇವೆ. ರಮೇಶ ಜಾರಕಿಹೊಳಿ ಸೇರಿದಂತೆ ಹಲವರೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಹೈಕಮಾಂಡ್ ಮಧ್ಯಪ್ರವೇಶಿಸಿ ಈ ಚುನಾವಣೆ ನಡೆಸಲಿ ಎಂದರು.
ನಾನೇ ನಂಬರ್ ಒನ್ ಲೀಡರ್: ಯತ್ನಾಳ ಅವರು ನಂಬರ್ ಒನ್ ಲೀಡರ್ ಯಾವಾಗ ಆಗುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹಣ ತೆಗೆದುಕೊಂಡು ಮಾಡಿಸಿದ ಬೋಗಸ್ ಸಮೀಕ್ಷೆಗಳನ್ನೆಲ್ಲ ಬಿಡಬೇಕು. ಸರಿಯಾದ ಸಮೀಕ್ಷೆಯಾಗಬೇಕು. ಸರಿಯಾದ ಸರ್ವೇ ಆಗಬೇಕು. ನಮ್ಮ ಸರ್ವೇ ಪ್ರಕಾರ ನಾನೇ ನಂಬರ್ ಒನ್ ಲೀಡರ್ ಎಂದರು.
ಯತ್ನಾಳ್ ವಿರೋಧಿ ಬಣ ದೆಹಲಿಗೆ ಹೋಗಲಿ, ವಾಷಿಂಗ್ಟನ್‌ಗೆ ಹೋಗಲಿ, ಎಲ್ಲಿ ಬೇಕಾದಲ್ಲಿ ಹೋಗಿ ಆರೋಪಿಸಲಿ ಸತ್ಯ ಸತ್ಯವೇ. ಮಾಧ್ಯಮದವರು ಒಳ್ಳೆಯವರನ್ನು ಮಾತನಾಡಿಸಿ, ಕಿಸೆ ಕಳ್ಳರನ್ನು, ದಲಿತರ ಮೀಸಲಾತಿ ಕಸಿದುಕೊಂಡ ನಾಲಾಯಕರನ್ನು ಬಿಡಬೇಕು ಎಂದು ಪರೋಕ್ಷವಾಗಿ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು.ನನ್ನ ವಿರುದ್ಧ ಕೊಟ್ಟಿರುವ ದೂರಿನ ಪ್ರತಿಗಳಿಂದ ಬಿಜೆಪಿಯ ಕಾರ್ಯಾಲಯದ ಒಂದು ರೂಮ್ ತುಂಬಿದೆ. ಇದೊಂದು ದೂರು ಕೊಟ್ಟಲ್ಲಿ ಅದು ಹೋಗಿ ಬೀಳುತ್ತದೆ. ಈಗಾಗಲೇ ನೋಟೀಸ್‌ಗೆ ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಬಿಜೆಪಿ ಸೋಲಿಗೆ ಕಾರಣ:
ಕರ್ನಾಟಕದಲ್ಲಿ ಬಿಜೆಪಿಗೆ ಸೋಲಾಗಲು ಹಿಂದೂಗಳ ರಕ್ಷಣೆ ಮಾಡದೇ ಇರುವುದೇ ಪ್ರಮುಖ ಕಾರಣ. ಒಂದು ವೇಳೆ ಹಿಂದೂಗಳ ರಕ್ಷಣೆ ಮಾಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸುತ್ತಿರಲಿಲ್ಲ ಎಂದ ಅವರು, ಮುಡಾ ಹಗರಣದಲ್ಲಿ ಯಾರೂ ಸಾಚಾಗಳಲ್ಲ. ಸಿದ್ದರಾಮಯ್ಯ ಸೇರಿದಂತೆ ಬಿ.ವೈ. ವಿಜಯೇಂದ್ರ, ಜಿ.ಟಿ. ದೇವೆಗೌಡರ ಪಾಲು ಕೂಡ ಈ ಹಗರಣದಲ್ಲಿದೆ ಎಂದು ಆರೋಪಿಸಿದರು.
ಸರ್ಕಾರ-ಬಿವೈವಿ ನಡುವೆ ಅಡ್ಜಸ್ಟಮೆಂಟ್: ರಾಜ್ಯ ಸರ್ಕಾರವನ್ನು ನಾವು ಟಾರ್ಗೇಟ್ ಮಾಡುತ್ತಿಲ್ಲ, ಬದಲಾಗಿ ಸಿ.ಟಿ. ರವಿ, ನನ್ನ ಸೇರಿದಂತೆ ಹಿಂದೂ ಪರವಾಗಿ ಮಾತನಾಡುವವರನ್ನು ಟಾರ್ಗೇಟ್ ಮಾಡಲಾಗುತ್ತಿದೆ. ಅದೇ ಬಿ.ವೈ. ವಿಜಯೇಂದ್ರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಇದನ್ನು ನೋಡಿದರೆ ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಡಸ್ಟಮೆಂಟ್ ಇದೆ ಎಂದು ಆರೋಪಿಸಿದರು.