ಕನ್ನಡಪ್ರಭ ವಾರ್ತೆ ಮಂಡ್ಯ
ರಾಜಕಾರಣದಲ್ಲಿ ಅಧಿಕಾರದ ಅವಕಾಶಗಳು ದೊರೆತಾಗ ಜನಪರವಾದ ಕೆಲಸಗಳನ್ನು ಮಾಡಿಬಿಡಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಅವಕಾಶಗಳು ಸಿಗುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ನಡೆದ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಸಮರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾವೇರಿ ಅಂತಿಮ ತೀರ್ಪು ಬಂದ ವೇಳೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೆರೆ ತುಂಬಿಸುವ ಕಾರ್ಯಗಳನ್ನು ಕೈಗೊಂಡರೆ ಅನಾಹುತವೇ ಆಗಲಿದೆ ಎಂದು ಹೇಳಿಕೊಂಡೇ ಬಂದಿದ್ದರು. ನಮ್ಮ ಪಾಲಿನ ನೀರನ್ನು ಬಳಸುವುದಕ್ಕೆ ನಮಗೆ ಹಕ್ಕಿದ್ದರೂ ಅದನ್ನು ಬಳಸಿಕೊಳ್ಳುತ್ತಿರಲಿಲ್ಲ. ಅದರ ನಡುವೆಯೂ ಲೋಕಪಾವನಿ ನದಿಯಿಂದ ನೀರನ್ನು ಎತ್ತಿ ಆರು ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಬೊಮ್ಮಾಯಿ ಅವರು ಮಾಡಿದ್ದಾರೆ. ಅದಕ್ಕಾಗಿ ಜನರು ಕೃತಜ್ಞತೆ ಸಮರ್ಪಿಸುತ್ತಿರುವುದು ಶ್ಲಾಘನೀಯ ಎಂದರು.ಮಂಡ್ಯ ಜಿಲ್ಲೆ ಇಂದಿಗೂ ಶೇ.೫೦ರಷ್ಟು ನೀರಾವರಿ ಪ್ರದೇಶವನ್ನು ಮಾತ್ರ ಹೊಂದಿದೆ. ಜಿಲ್ಲೆಗೆ ಶೇ.೧೦೦ರಷ್ಟು ನೀರಾವರಿ ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿ. ಜಿಲ್ಲೆಯ ಎಲ್ಲ ಕೆರೆ-ಕಟ್ಟೆಗಳನ್ನು ತುಂಬಿಸುವುದು. ಅಂತರ್ಜಲ ಹೆಚ್ಚಿಸುವುದು. ಕೆರೆಗಳ ಅಚ್ಚುಕಟ್ಟು ವ್ಯಾಪ್ತಿಯನ್ನು ಹೆಚ್ಚಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಹೇಳಿದರು.
ಬಸವರಾಜ ಬೊಮ್ಮಾಯಿ ಅವರು ಮಂಡ್ಯಕ್ಕೆ ಮಾತ್ರವಲ್ಲದೆ, ಚಾಮರಾಜನಗರ, ಗುಂಡ್ಲುಪೇಟೆ ಪ್ರದೇಶದ ಬರಡು ಪ್ರದೇಶಕ್ಕೂ ನೀರು ಹರಿಯುವಂತೆ ಮಾಡಿ ನೀರಾವರಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಲ್ಲಿನ ಜನರೂ ಇವರನ್ನು ಅಭಿನಂದಿಸುವುದಕ್ಕೆ ಉತ್ಸುಕರಾಗಿದ್ದಾರೆ. ಆದರೆ, ಸಮಾರಂಭಕ್ಕೆ ಬರಲು ದಿನಾಂಕವನ್ನೇ ನೀಡುತ್ತಿಲ್ಲ. ಈಗ ಬಸವರಾಜು ಅವರ ಮೂಲಕ ಅಲ್ಲಿಗೆ ಕರೆಸಬೇಕಿದೆ.
- ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ
ಕೆಆರ್‌ಎಸ್ ಅಣೆಕಟ್ಟೆ ಕಟ್ಟುವುದಕ್ಕೆ ಒಬ್ಬ ಸಾಮಾನ್ಯ ಬಡ ರೈತ ಮೈಸೂರು ಮಹಾರಾಜರನ್ನು ಪ್ರೇರೇಪಿಸಿದ. ಈ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸುವುದಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಎಲೆಚಾಕನಹಳ್ಳಿ ಬಸವರಾಜು ಪ್ರೇರೇಪಿಸಿದರು. ಈಗ ನೀರು ಹರಿದಿದೆ. ಹಸಿರು ತುಂಬಿದೆ. ಜನರ ಬದುಕು ಹಸನಾಗಿದೆ. ಅಧಿಕಾರದಲ್ಲಿ ಎಷ್ಟು ಅವಧಿ ಇರುತ್ತೇವೆ ಎನ್ನುವುದು ಮುಖ್ಯವಾಗಬಾರದು. ಸಿಕ್ಕ ಅಧಿಕಾರ ಬಳಸಿಕೊಂಡು ಜನಪರವಾದ ಕೆಲಸ ಏನು ಮಾಡಿದೆವು ಎನ್ನುವುದು ಮುಖ್ಯವಾಗಬೇಕು.- ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ