ಶ್ರಾವಣ ಶನಿವಾರ: ವಿವಿಧ ದೇವರಿಗೆ ವಿಶೇಷ ಪೂಜೆ

| Published : Aug 25 2024, 01:49 AM IST

ಸಾರಾಂಶ

ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ನಗರದ ಕೆಲವೆಡೆ ಹರಿಕಥೆ, ಶನಿದೇವರಿಗೆ ವಿಶೇಷಪೂಜೆ, ಅನ್ನಸಂತರ್ಪಣೆ, ವಿಷ್ಣು ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ನಗರದ ಕೆಲವೆಡೆ ಹರಿಕಥೆ, ಶನಿದೇವರಿಗೆ ವಿಶೇಷಪೂಜೆ, ಅನ್ನಸಂತರ್ಪಣೆ, ವಿಷ್ಣು ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ ಮಾಡಲಾಯಿತು.

ನಗರದ ನೃಪತುಂಗ ವೃತ್ತದಲ್ಲಿರುವ ಶನಿದೇವರ ಭಕ್ತ ವೃಂದದಿಂದ ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ, ಶನಿದೇವರನ್ನು ವಿಶೇಷವಾಗಿ ಅಲಂಕರಿಸಿ, ಮಹಾಮಂಗಳಾರತಿ ನಡೆಸಿ, ಮಂಡ್ಯದ ಶಿವಾರ್ ಉಮೇಶ್ ಮತ್ತು ತಂಡದವರಿಂದ ಶನೈಶ್ಚರಸ್ವಾಮಿ ಹರಿಕಥೆಯನ್ನು ಏರ್ಪಡಿಸಿ, ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು,

ಸ್ವಯಂ ಪ್ರೇರಿತರಾಗಿ, ದವಸ ಧಾನ್ಯಗಳನ್ನು ಸಂಗ್ರಹಿಸಿ, ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಿ, ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಿದರು.

ಭಕ್ತರು ಮಡಿಯುಟ್ಟು ದೇವಸ್ಥಾನಗಳತ್ತ ಜಮಾಯಿಸಿದರು, ಅದರಲ್ಲೂ ವಿಷ್ಣು ದೇವಸ್ಥಾನಗಳತ್ತ ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನಗಳ ಅರ್ಚಕರು ಮುಂಜಾನೆಯೇ ಬಂದು ದೇವಸ್ಥಾನಗಳನ್ನು ಬಾಳೆ ಕಂದು, ಮಾವಿನ ಸೊಪ್ಪುಗಳಿಂದ ಶೃಂಗಾರಗೊಳಿಸಿ, ದೇವರನ್ನು ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಿದರು.

ನಗರದ ಹರಳುಕೋಟೆ ಆಂಜನೇಯಸ್ವಾಮಿ, ಜನಾರ್ಧನಸ್ವಾಮಿ, ಚಾಮರಾಜೇಶ್ವರ, ಕೊಳದ ಗಣಪತಿ, ಲಕ್ಷ್ಮಿಕಾಂತ, ಕಾಂತ ನಾರಾಯಣಸ್ವಾಮಿ, ಕರಿವರದರಾಜಸ್ವಾಮಿ, ದೇವಸ್ಥಾನಗಳಿಗೆ ಭಕ್ತರು ತಂಡೋಪತಂಡವಾಗಿ ತೆರಳಿ ವಿಶೇಷಪೂಜೆ ಸಲ್ಲಿಸಿದರು.