ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿಯ ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರದಿಂದಲೇ ದೇವಾಲಯದ ಆವರಣವನ್ನು ತಳಿರು ತೋರಣ, ಹೂಗಳಿಂದ ಶೃಂಗರಿಸಲಾಗಿತ್ತು. ರಾತ್ರಿ ೧೦.೩೦ ರಿಂದ ೧೨ ಗಂಟೆಯವರೆಗೆ ದೇವರಿಗೆ ಪಂಚರಾತ್ರಾಗಮರೀತ್ಯ ಮಹಾಭಿಷೇಕ ಮತ್ತು ಪೂಜೆ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೊನೆಯ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಮುಂಜಾನೆಯಿಂದಲೇ ದೇವರಿಗೆ ವಿವಿಧ ಬಗೆಯ ಅಭಿಷೇಕ, ಅರ್ಚನೆ, ಅಲಂಕಾರ, ವಿಶೇಷ ಪೂಜೆಗಳು ಸಾಂಗೋಪಸಾಂಗವಾಗಿ ನಡೆದವು. ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವುದರೊಂದಿಗೆ ಧನ್ಯತಾಭಾವ ಮೆರೆದರು.

ತಾಲೂಕಿನ ಕೊಮ್ಮೇರಹಳ್ಳಿಯ ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರದಿಂದಲೇ ದೇವಾಲಯದ ಆವರಣವನ್ನು ತಳಿರು ತೋರಣ, ಹೂಗಳಿಂದ ಶೃಂಗರಿಸಲಾಗಿತ್ತು. ರಾತ್ರಿ ೧೦.೩೦ ರಿಂದ ೧೨ ಗಂಟೆಯವರೆಗೆ ದೇವರಿಗೆ ಪಂಚರಾತ್ರಾಗಮರೀತ್ಯ ಮಹಾಭಿಷೇಕ ಮತ್ತು ಪೂಜೆ ಏರ್ಪಡಿಸಲಾಗಿತ್ತು. ಶನಿವಾರ ಮುಂಜಾನೆಯಿಂದ ಏಕಶಿಲೆಯ ಶ್ರೀ ಕಂಬದ ನರಸಿಂಹಸ್ವಾಮಿ ದೇವರಿಗೆ ವಿವಿಧ ಅಭಿಷೇಕ, ಪೂಜೆ ನೆರವೇರಿಸಿ, ಮಹಾರಾಜನ ವೇಷಧಾರಿಯ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ದೇವಾಲಯದ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಭಕ್ತಾದಿಗಳು ಸಹ ಬೆಟ್ಟದ ಕೆಳಗೆ ಅನ್ನಪ್ರಸಾದವನ್ನು ನೀಡುತ್ತಿದ್ದುದು ಕಂಡುಬಂತು. ಭಕ್ತರು ಜಾತ್ರೆಯ ರೀತಿಯಲ್ಲಿ ದೇವಾಲಯಕ್ಕೆ ಹರಿದುಬರುತ್ತಿದ್ದರು.

ನಗರದ ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಗಿನಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ನಂತರ ಬೆಳಗ್ಗೆ ೧೦ ಗಂಟೆಯಿಂದಲೇ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ನಗರದ ಪ್ರಮುಖ ದೇವಾಲಯಗಳಾದ ಪೇಟೆಬೀದಿಯ ಶ್ರೆ ಲಕ್ಷ್ಮೀ ಜನಾರ್ಧನಸ್ವಾಮಿ ದೇವಾಲಯ, ಶ್ರೀ ಶ್ರೀನಿವಾಸ ದೇವಾಲಯ, ಹೊಸಹಳ್ಳಿ ಬಡಾವಣೆಯ ಶ್ರೆ ಶ್ರೆನಿವಾಸ ದೇವಾಲಯ, ಬೋವಿ ಕಾಲೋನಿಯ ಶ್ರೆ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಾಲಯ, ನಗರದ ಮೈಸೂರು-ಬೆಂಗಳೂರು ಹೆದ್ದಾರಿ ಕಲ್ಲಹಳ್ಳಿಯ ಶ್ರೀಆಂಜನೇಯ ದೇವಸ್ಥಾನ, ಬನ್ನೂರು ರಸ್ತೆಯ ಶ್ರೀ ಅಭಯ ಆಂಜನೇಯಸ್ವಾಮಿ ದೇಗುಲಕ್ಕೆ ಬೆಳಿಗ್ಗೆಯಿಂದಲೇ ಭಕ್ತರ ದಂಡು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಪುನೀತರಾದರು.