ಇಂದಿನಿಂದ ಸುಮಂಗಲಿಯರ ಶ್ರಾವಣ ಚೂಡಿ ಪೂಜೆ

| Published : Aug 09 2024, 12:48 AM IST

ಸಾರಾಂಶ

ಕರಾವಳಿಯ ಗೌಡ ಸಾರಸ್ವತ ಕುಟುಂಬಗಳಲ್ಲಿ ಚೂಡಿ ಪೂಜೆ ಸರ್ವೇ ಸಾಮಾನ್ಯ. ಮುತ್ತೈದೆಯರು ತುಳಸಿ ಕಟ್ಟೆ ಬಳಿ ಸಾಮೂಹಿಕವಾಗಿ ಚೂಡಿ ಪೂಜೆ ನಡೆಸುವುದು ಪದ್ಧತಿ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಶ್ರಾವಣ ಮಾಸ ವೇದಾಂತಿಗಳು, ದಾರ್ಶನಿಕರಿಂದ ಪ್ರಶಂಸಿತ, ಪುರಾಣಗಳೇ ಹೇಳುವಂತೆ ದೇವತೆಗಳಿಗೂ ಪ್ರಿಯವಾದ ಮಾಸ. ಶ್ರಾವಣದಲ್ಲಿ ಮಳೆಯ ಆರ್ಭಟ ಕಮ್ಮಿ ಯಾದಂತೆ ಹಚ್ಚ ಹಸುರಿನ ಸೀರೆಯುಟ್ಟು ನಲಿಯುತ್ತಾಳೆ. ಇನ್ನೊಂದೆಡೆ ನಾಗರ ಪಂಚಮಿ, ವರಮಹಾಲಕ್ಷ್ಮೀ ವ್ರತ, ಮಂಗಳ ಗೌರಿ ವ್ರತ, ನೂಲ ಹುಣ್ಣಿಮೆ, ಕೃಷ್ಣಾಷ್ಟಮಿ. ಹೀಗೆ ಸಾಲು ಸಾಲು ಹಬ್ಬಗಳ ಸಂಭ್ರವೂ ಜತೆಗೂಡುತ್ತದೆ.

ಕರಾವಳಿಯ ಗೌಡ ಸಾರಸ್ವತ ಬ್ರಾಹ್ಮಣರು ಶ್ರಾವಣದಲ್ಲಿ ಚೂಡಿಪೂಜೆ ಮಾಡುವ ಮೂಲಕ ಪ್ರಕೃತಿಯನ್ನು ನೆನೆಯುತ್ತಾರೆ. ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರ ಈ ಪೂಜೆಯನ್ನು ನಡೆಸಲಾಗುತ್ತದೆ. ಶ್ರಾವಣ ಮಾಸ ಬಂತೆಂದರೆ ಸಾಕು ಕರಾವಳಿಯ ಗೌಡ ಸಾರಸ್ವತ ಕುಟುಂಬಗಳಲ್ಲಿ ಚೂಡಿ ಪೂಜೆ ಸರ್ವೇ ಸಾಮಾನ್ಯ. ಮುತ್ತೈದೆಯರು ತುಳಸಿ ಕಟ್ಟೆ ಬಳಿ ಸಾಮೂಹಿಕವಾಗಿ ಚೂಡಿ ಪೂಜೆ ನಡೆಸುವುದು ಪದ್ಧತಿ. ಚೂಡಿ ಪೂಜೆ: ಪ್ರಕೃತಿಯಲ್ಲಿ ಹೇರಳವಾಗಿ ಸಿಗುವ ಕರವೀರ, ಅಗತೆ ಹೂವು, ಮಿಠಾಯಿ ಹೂವು, ನೆಲನೆಲ್ಲಿ, ಅನ್ವಾಲಿ, ರಥ ಹೂ, ಗಂಟಿ ಗಿಡ, ಕಾಗೆ ಕಣ್ಣು, ಶಂಕಪುಷ್ಪ, ರತ್ನ ಗಂಧಿ ಮತ್ತು ಗರಿಕೆಗಳನ್ನು ಸುಂದರವಾಗಿ ಜೋಡಿಸಿ ‘ಚೂಡಿ’ ಮಾಡಿ ಅದನ್ನು ಬಾಳೆಯ ನಾರಲ್ಲಿ ಕಟ್ಟಲಾಗುತ್ತದೆ. ಬಳಿಕ ತುಳಸಿ ಕಟ್ಟೆ ಮುಂದೆ ಇರಿಸಿ ಪ್ರದಕ್ಷಿಣೆ ಹಾಕಿ ಅಕ್ಷತೆ ಹಾಕಲಾಗುತ್ತದೆ. ಮುತ್ತೈದೆಯರು ತುಳಸಿಗೆ ಈ ಪೂಜೆ ಸಲ್ಲಿಸುವುದರಿಂದ ಗಂಡಂದಿರಿಗೆ ಮತ್ತು ಮಕ್ಕಳಿಗೆ ಒಳ್ಳೆಯದಾಗುತ್ತದೆ ಎನ್ನುವುದು ನಂಬಿಕೆ. ಸರಸ್ವತಿ ನದೀ ತೀರದಲ್ಲಿ ಹಿಂದೆ ಇದ್ದ ವಂಶ ಗೌಡ ಸಾರಸ್ವತ ಎಂದೂ, ಈ ವಂಶ ಕಾಡಿನಲ್ಲಿ ಬದುಕುತ್ತಿತ್ತೆಂದೂ, ಶೃಂಗಾರ ಪ್ರಿಯರಾದ ಇವರು ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ದೊರೆತ ಹೂಗಳನ್ನು ಚೂಡಿ ಕಟ್ಟಿ ಪೂಜಿಸುತ್ತಿದ್ದರು ಎಂಬುದು ಇತಿಹಾಸ. ಈ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದ್ದು, ಕೆಲವೆಡೆ ದೇವಸ್ಥಾನಗಳಲ್ಲಿ ಪೂಜೆಯ ವ್ಯವಸ್ಥೆ ಮಾಡಿದರೆ, ಕೆಲವು ಮನೆಗಳಲ್ಲಿ ಮುತ್ತೈದೆಯರು ಸಾಮೂಹಿಕವಾಗಿ ಚೂಡಿ ಪೂಜೆ ಮಾಡುತ್ತಾರೆ. ಗೌಡ ಸಾರಸ್ವತರಲ್ಲದೆ ವಿಶ್ವಕರ್ಮರಲ್ಲಿ ಮತ್ತು ದೈವಜ್ಞರಲ್ಲೂ ಈ ಪದ್ಧತಿ ಚಾಲ್ತಿಯಲ್ಲಿದೆ.

ಹೊಸದಾಗಿ ಮದುವೆಯಾದ ಹೆಣ್ಣಿಗೆ ಕುಟುಂಬದ ಮುತ್ತೈದೆಯರೆಲ್ಲರೂ ಒಟ್ಟು ಗೂಡಿ ಚೂಡಿ ಪೂಜೆಯ ಅರ್ಹತೆ ಪಡೆದ ನವ ವಧುವಿಗೆ ಪರಂಪರೆಯ ಹಾದಿ ತೋರಿಸಿ ಬದುಕಿನ ಸಂಸ್ಕೃತಿ ಪರಿಚಯಿಸುವ ಮಾರ್ಗವೂ ಇದಾಗಿದೆ.

‘ಚೂಡಿ’'''''''' ಶಬ್ದವು ಕನ್ನಡದ ಸೂಡಿ ಅರ್ಥಾತ್‌ ಗಂಟು, ಗುಂಪು ಎನ್ನುವ ಅರ್ಥ ಹೊಂದಿದೆ. ಗರಿಕೆ ಹುಲ್ಲಿನೊಂದಿಗೆ ರಥ ಪುಷ್ಪ, ಕರವೀರ, ರತ್ನಗಂಧಿ, ಮಿಠಾಯಿ ಹೂವು ಹಾಗೂ ವೈವಿಧ್ಯಮಯ ಸಸ್ಯಗಳಾದ ಅನ್ವಾಳೆ, ಲಾಯೆಮಾಡ್ಡೊ, ನೆಲ ನೆಲ್ಲಿ, ಕಾಟ್‌ಚಿರ್ಡೋ, ಕಾಯ್‌ಳ್ಯಾದೋಳೋ ಮಜ್ರಾನಾಂಕುಟ, ಗಾಂಟಿಮಾಡ್ಡೊ ಇತ್ಯಾದಿ ನಿಸರ್ಗ ಸಹಜವಾಗಿ ಬೆಳೆಯುವ ಕಾಟು ಹೂಗಳನ್ನೆಲ್ಲಾ ಜೋಡಿಸಿ ಬಾಳೆ ಹಗ್ಗದಿಂದ ಒಟ್ಟಿಗೆ ಕಟ್ಟಿದರೆ ಅದೇ ಚೂಡಿ.