ಸಹಕಾರ ಸಂಘಗಳಲ್ಲಿ ಸರ್ಕಾರ, ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು

| Published : Sep 16 2024, 01:57 AM IST

ಸಹಕಾರ ಸಂಘಗಳಲ್ಲಿ ಸರ್ಕಾರ, ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕುಗಳಲ್ಲಿ ಷರತ್ತುಗಳನ್ನು ನಿಭಾಯಿಸಿ ಸಾಲ ಪಡೆಯುವ ಕಷ್ಟದ ಸಮಯದಲ್ಲಿ ಸಹಕಾರಿ ಸಂಘಗಳು ನೆರವಾಗಲಿವೆ

ಕನ್ನಡಪ್ರಭ ವಾರ್ತೆ ಮೈಸೂರು

ಸಹಕಾರ ಸಂಘಗಳಲ್ಲಿ ಸರ್ಕಾರ ಮತ್ತು ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ ಭಾನುವಾರ ಆಯೋಜಿಸಿದ್ದ ಹಿರಿಯ ಸಹಕಾರಿಗಳನ್ನು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಈ ಸಂಬಂಧ ಚರ್ಚೆಯಾಯಿತು. ನಾವು ಅದಕ್ಕೆ ಆಸ್ಪದ ಕೊಡಲಿಲ್ಲ ಎಂದರು.

ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಮತ್ತು ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು ಎಂಬ ದೃಷ್ಠಿಯಿಂದ ಸಹಕಾರಿ ಕ್ಷೇತ್ರಕ್ಕೆ ನಿಯಮಕ್ಕೆ ತಿದ್ದುಪಡಿ ತಂದಿದ್ದ ಕಾಯ್ದೆಯನ್ನು ವಿಧಾನಪರಿಷತ್ತಿನಲ್ಲಿ ತಡೆಹಿಡಿಯಲಾಗಿತ್ತು ಎಂದು ಅವರು ಹೇಳಿದರು.

ಬ್ಯಾಂಕುಗಳಲ್ಲಿ ಷರತ್ತುಗಳನ್ನು ನಿಭಾಯಿಸಿ ಸಾಲ ಪಡೆಯುವ ಕಷ್ಟದ ಸಮಯದಲ್ಲಿ ಸಹಕಾರಿ ಸಂಘಗಳು ನೆರವಾಗಲಿವೆ. ಸಹಕಾರಿ ಸಂಘ- ಸಂಸ್ಥೆಗಳಲ್ಲಿ ಹಣ ಕೂಡಿಕೆ ಮಾಡುವುದು ಮನೆಯಲ್ಲಿಯೇ ಇಟ್ಟಂತೆ. ಸಹಕಾರಿ ಸಂಘಗಳು ಮುನ್ನಡೆಯಲು ಸದಸ್ಯರ ಸಹಕಾರ ಮುಖ್ಯವಾದದ್ದು. ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭ. ಆದರೆ, ಯಶಸ್ವಿಯಾಗಿ ಮುನ್ನಡೆಸುವುದು ಸುಲಭವಲ್ಲ ಎಂದು ಅವರು ತಿಳಿಸಿದರು.

ಎಲ್ಲವೂ ಸರಿ ಇದ್ದರೆ ಮಾತ್ರ ಯಶಸ್ವಿ

ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಅವ್ಯವಹಾರ, ವ್ಯತ್ಯಾಸಗಳಿಂದ ಎಷ್ಟೋ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ, ಕೃಷ್ಣರಾಜೇಂದ್ರ ಬ್ಯಾಂಕ್ 99 ವರ್ಷಗಳು ತುಂಬಿದ್ದು, ಎಲ್ಲವೂ ಸರಿ ಇದ್ದರೆ ಮಾತ್ರ ಸಂಘಗಳು ಯಶಸ್ವಿಯಾಗಿ ನಡೆಯಲು ಸಾಧ್ಯ. ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದಾಗ ಮಾತ್ರ ಬ್ಯಾಂಕ್ ಯಶಸ್ವಿಯಾಗಲು ಸಾಧ್ಯ ಎಂದರು.

ಈ ಹಿಂದೆ ಸಹಕಾರ ಸಂಘಗಳ ಚುನಾವಣೆಗಳು ಗೊತ್ತೇ ಆಗುತ್ತಿರಲಿಲ್ಲ. ಆದರೆ, ಈಗ ಲೋಕಸಭೆ, ವಿಧಾನಸಭಾ ಚುನಾವಣೆಗಳಿಗಿಂತಲೂ ಕಡಿಮೆ ಇಲ್ಲದಂತೆ ಚುನಾವಣೆಗಳು ನಡೆಯುತ್ತವೆ. 9088 ಸದಸ್ಯರನ್ನು ಹೊಂದಿರುವ ಈ ಬ್ಯಾಂಕ್‌ ಶೇ.8ರ ಬಡ್ಡಿ ದರದಲ್ಲಿ 43 ಕೋಟಿ ಸಾಲ ನೀಡಿದೆ. ಯಾವುದೇ ಸದಸ್ಯರಿಗೆ ಬ್ಯಾಂಕ್ ನಮ್ಮದು ಎಂಬ ಮನೋಭಾವ ಬರಬೇಕು ಎಂದು ಅವರು ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿ

ಹಿರಿಯ ಸಹಕಾರಿಗಳಾದ ಕೆ.ವಿ. ನರಸಿಂಹಶೆಟ್ಟಿ, ಬಿ. ಪುಟ್ಟಸ್ವಾಮಿ, ಎಸ್.ಬಿ. ವಿಜಯಕುಮಾರ್, ಎಸ್. ಸದಾನಂದ, ಎಂ.ಕೆ. ಪುಟ್ಟಸ್ವಾಮಿ, ಸಿದ್ದರಾಜು, ಪಿ.ಸಿ. ನಾಗರಾಜನ್, ಕೆ.ಎಲ್. ಅನಂತರಾಮಯ್ಯ, ಎನ್. ನಾಗರಾಜು, ಡಿ. ರಾಮು, ಜಿ. ಕೃಷ್ಣ, ಕೆ. ಚಂದ್ರ, ಚನ್ನಯ್ಯ, ಬಾಲಂಬ, ಕಾತ್ಯಾಯಿನಿ, ಎನ್. ಜಯಲಕ್ಷ್ಮಿ, ಕೆ.ಆರ್. ಸೀತಾಲಕ್ಷ್ಮಿ, ಸುಶೀಲಮ್ಮ, ಡಿ. ಆಶಾಕುಮಾರಿ, ಕೆ.ಎಸ್. ಸುನಂದಾ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕುಂದೂರು ಮಠದ ಶ್ರೀ ಡಾ. ಶರತ್‌ ಚಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪ್ರತಿಧ್ವನಿ ಪ್ರಸಾದ್, ಉಪಾಧ್ಯಕ್ಷ ಡಿ. ಬಸವರಾಜು, ನಿರ್ದೇಶಕರಾದ ಎಂ.ಡಿ. ಪಾರ್ಥಸಾರಥಿ, ಸರ್ವಮಂಗಳ, ನವೀನ್ ಕುಮಾರ್, ಎಚ್.ವಿ. ಭಾಸ್ಕರ್, ಅರುಣ್ ಸಿದ್ದಪ್ಪ, ನಾಗೇಂದ್ರಪ್ರಸಾದ್ ವಾಟಾಳ್, ಬಿ. ನಾಗರಾಜು, ವೃತ್ತಿಪರ ನಿರ್ದೇಶಕ ಎ. ಶ್ರೀನಿವಾಸ ಶೆಟ್ಟಿ, ವಿ.ಎಂ. ನಾಗೇಂದ್ರಪ್ರಸಾದ್, ಪ್ರಭಾರ ವ್ಯವಸ್ಥಾಪಕ ಡಿ. ಅನಂತವೀರಪ್ಪ ಇದ್ದರು.

----

ಕೋಟ್...

ಎಷ್ಟೋ ಸಹಕಾರ ಸಂಘಗಳು ಬೆಳೆದು ಇಂದು ಬ್ಯಾಂಕ್‌ ಗಳಾಗಿ ಪರಿವರ್ತನೆಗೊಂಡಿವೆ. ಕಡಿಮೆ ಬಡ್ಡಿ ದರದಲ್ಲಿ ಸಂಘದ ಸದಸ್ಯರಿಗೆ ಸಾಲ ನೀಡುವ ಮೂಲಕ ಕಷ್ಟದ ಕಾಲದಲ್ಲಿ ನೆರವಾಗಿವೆ. ಒಬ್ಬ ವ್ಯಕ್ತಿಯಿಂದ ಸಹಕಾರ ಸಂಘಗಳು ಬೆಳೆಯಲು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಕೂಡಿಕೊಂಡು ತಿಳವಳಿಕೆಯಿಂದ ಕೆಲಸ ಮಾಡಿದರೆ ಸಂಘಗಳು ಬೆಳೆಯಲು ಸಾಧ್ಯ.

- ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸಭಾಪತಿ

----

ಸಹಕಾರ ಸಂಘಗಳಲ್ಲಿ ರಾಜಕಾರಣ, ಸರ್ಕಾರದ ಹಸ್ತಕ್ಷೇಪ ಇಲ್ಲದಂತೆ ಸ್ವಾಯತ್ತ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಖಾಸಗಿ ಬ್ಯಾಂಕ್‌ ಗಳಲ್ಲಿ ಷೇರುದಾರರು ದೊಡ್ಡ ಉದ್ಯಮಿಗಳಾಗಿರುತ್ತಾರೆ. ಆದರೆ, ಸಹಕಾರ ಸಂಘಗಳಲ್ಲಿ ಇದು ಕಡಿಮೆ. ಮಧ್ಯಮ ವರ್ಗದವರು ಹೆಚ್ಚಿನ ಜನರು ಇರುತ್ತಾರೆ. ಸಹಕಾರಿ ಸಂಸ್ಥೆಗಳು ಉಳಿಯಬೇಕು, ಬೆಳೆಯಬೇಕು.

- ಜಿ.ಡಿ. ಹರೀಶ್ ಗೌಡ, ಶಾಸಕರು, ಹುಣಸೂರು