ಕುಶಾಲನಗರ ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಕಚೇರಿಯನ್ನು ಮೇ 20ರಂದು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸುವರು ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಎನ್. ಅಶೋಕ್ ತಿಳಿಸಿದ್ದಾರೆ.

ಕುಶಾಲನಗರ: ಕುಶಾಲನಗರ ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಕಚೇರಿಯನ್ನು ಮೇ 20ರಂದು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸುವರು ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಎನ್. ಅಶೋಕ್ ತಿಳಿಸಿದ್ದಾರೆ.ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಶಾಸಕ ಅನಿಲ್ ಚಿಕ್ಕಮಾದು ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವರು. ಈ ಸಂದರ್ಭ ಕಲಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಅಶೋಕ್ ಅಧ್ಯಕ್ಷತೆಯಲ್ಲಿ ನಡೆಯುವ ವೇದಿಕೆ ಕಾರ್‍ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸುವರು.ಡಾ. ಪ್ರಸನ್ನಾನಂದ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್‍ಯಕ್ರಮದಲ್ಲಿ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸದಸ್ಯರಿಗೆ ಪಾಲು ಬಂಡವಾಳ ದೃಢೀಕರಣಪತ್ರ ವಿತರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎ.ಎಸ್. ಪೊನ್ನಣ್ಣ ಪಾಲ್ಗೊಂಡು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸುವರು. ಸಂಘದಲ್ಲಿ ಪ್ರಸಕ್ತ 300 ಸದಸ್ಯರು ನೋಂದಾಯಿಸಿದ್ದು, ಸಂಘದ ಮೂಲಕ ಠೇವಣಿ ಹಾಗೂ ಜಾಮೀನು ಸಾಲ, ವೈಯಕ್ತಿಕ ಸಾಲ, ಆಭರಣ ಸಾಲ ನೀಡಲಾಗುವುದು. ಸಮಾಜದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅಶೋಕ್ ತಿಳಿಸಿದರು.

ಇದೇ ಸಂದರ್ಭ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಸಂಘದ ಆಹ್ವಾನಪತ್ರ ಬಿಡುಗಡೆ ಮಾಡಿದರು. ಉಪಾಧ್ಯಕ್ಷ ಪಿ.ಟಿ. ಸುರೇಶ್, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.