ಯುಗಾದಿ ಸಂಭ್ರಮಕ್ಕೆ ಸಜ್ಜಾದ ಪುಣ್ಯಕ್ಷೇತ್ರಗಳು

| Published : Apr 09 2024, 12:48 AM IST

ಸಾರಾಂಶ

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಹಾಗೂ ದಕ್ಷಿಣ, ಮಧ್ಯ ಭಾರತೀಯರ ನೆಚ್ಚಿನ ಪುಣ್ಯಕ್ಷೇತ್ರವಾಗಿರುವ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ನಸುಕಿನ ಜಾವ 3 ಗಂಟೆಗೆ ನಿರ್ಗುಣ ಪಾದುಕೆಗಳ ಮಹಾಪೂಜೆ, ರುದ್ರಾಭಿಷೇಕ, ಕೆಸರ ಲೇಪನ ಪೂಜೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಕ್ರೋಧಿನಾಮ ಸಂವತ್ಸರದ ಚಂದ್ರಮಾನ ಯುಗಾದಿಯನ್ನು ಏ.9ರ ಮಂಗಳವಾರದಂದು ಸಂಭ್ರಮದಿಂದ ಆಚರಿಸುವುದಕ್ಕೆ ಅಫಜಲ್ಪುರ ತಾಲೂಕಿನ ಪುಣ್ಯಕ್ಷೇತ್ರಗಳು ಸಜ್ಜುಗೊಂಡಿವೆ.

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಹಾಗೂ ದಕ್ಷಿಣ, ಮಧ್ಯ ಭಾರತೀಯರ ನೆಚ್ಚಿನ ಪುಣ್ಯಕ್ಷೇತ್ರವಾಗಿರುವ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ನಸುಕಿನ ಜಾವ 3 ಗಂಟೆಗೆ ನಿರ್ಗುಣ ಪಾದುಕೆಗಳ ಮಹಾಪೂಜೆ, ರುದ್ರಾಭಿಷೇಕ, ಕೆಸರ ಲೇಪನ ಪೂಜೆ ನಡೆಯಲಿದೆ. ಬಳಿಕ ನೂತನ ಪಂಚಾಂಗ ಶ್ರವಣ, ಮ.12 ಗಂಟೆಗೆ ಮಾಧುಕರಿ ಅನ್ನ ಪ್ರಸಾದ ಸೇವೆ ಜರುಗಲಿವೆ. ಮಹಾಪೂಜೆಯಲ್ಲಿ ನಾಡಿನ, ದೇಶದ ಸಕಲ ಜೀವರಾಶಿಗೆ ಒಳಿತಾಗಲಿ, ಮಳೆ ಬೆಳೆ ಉತ್ತಮವಾಗಿ ಎಲ್ಲರೂ ಸುಖಿಯಾಗಿರಲೆಂದು ಹಾರೈಸಲಾಗುತ್ತದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

ಬಡದಾಳ ಮಠದಲ್ಲಿ ವಿಶೇಷ ಪೂಜೆ, ಬೇವು ಬೆಲ್ಲ ವಿತರಣೆ: ತಾಲೂಕಿನ ಇನ್ನೊಂದು ಪುಣ್ಯಕ್ಷೇತ್ರವಾಗಿರುವ ಸುಕ್ಷೇತ್ರ ಬಡದಾಳ ಗ್ರಾಮದ ಚನ್ನಮಲ್ಲೇಶ್ವರ ತೇರಿನ ಮಠದಲ್ಲಿ ಬೆಳಗಿನ ಜಾವ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಸಹಸ್ರ ಬಿಲ್ವಾರ್ಚನೆ ಜರುಗಲಿದೆ. ಬಳಿಕ ನೂತನ ಪಂಚಾಗದ ಶ್ರವಣ ಜರುಗುವುದು ನಂತರ ಭಕ್ತರೊಂದಿಗೆ ಬೇವು ಬೆಲ್ಲ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದ ಮಠದ ಪೂಜ್ಯರಾದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ತಿಳಿಸಿದ್ದಾರೆ.

ತಾಲೂಕಿನಾದ್ಯಂತ ವಿಶೇಷ ಪೂಜೆ: ಅಫಜಲ್ಪುರ ತಾಲೂಕಿನ ಸುಕ್ಷೇತ್ರಗಳಾದ ಚಿನ್ಮಯಗಿರಿಯ ಮಹಾಂತ ಮಠ, ಚಿನಮಳ್ಳಿಯ ಮಲ್ಲಿಕಾರ್ಜುನ ದೇವಾಲಯ, ಚಿಣಮಗೇರಿಯ ವೀರಭದ್ರೇಶ್ವರ ದೇವಾಲಯ, ಮಣೂರಿನ ಯಲ್ಲಮ್ಮ ದೇವಾಲಯ, ಘತ್ತರಗಿಯ ಭಾಗ್ಯವಂತಿ ದೇವಾಲಯ, ಗೌರ(ಕೆ) ಗ್ರಾಮದ ಮಲ್ಲಿಕಾರ್ಜುನ ದೇವಾಲಯ, ಆನೂರಿನ ಮಲ್ಲಿಕಾರ್ಜುನ ದೇವಾಲಯ, ಅಫಜಲ್ಪುರದ ಮಳೇಂದ್ರ ಮಠ, ಬಳೂರ್ಗಿಯ ಬಸವಣ್ಣ ದೇವಾಲಯ, ಅಂಕಲಗಿಯ ಮಲ್ಲಿಕಾರ್ಜುನ ದೇವಾಲಯ, ಚಿಂಚೋಳಿಯ ಗದ್ದುಗೇಶ್ವರ ಮಠ, ಉಡಚಣ, ಮಾಶಾಳ, ಮಲ್ಲಾಬಾದ, ಅರ್ಜುಣಗಿ, ಬಂದರವಾಡ ಸೇರಿದಂತೆ ತಾಲೂಕಿನಾದ್ಯಂತ ಇರುವ ಪುಣ್ಯಕ್ಷೇತ್ರಗಳಲ್ಲಿ ಯುಗಾದಿ, ಹೊಸವರ್ಷದ ಪ್ರಯುಕ್ತ ವಿಶೇಷ ಪೂಜೆಗಳು ಜರುಗಲಿವೆ.