ಭಕ್ತ ಸಾಗರದ ನಡುವೆ ಜರುಗಿದ ದೋಟಿಹಾಳದ ಶುಖಮುನಿ ಶ್ರೀ ರಥೋತ್ಸವ

| Published : Mar 11 2024, 01:20 AM IST

ಭಕ್ತ ಸಾಗರದ ನಡುವೆ ಜರುಗಿದ ದೋಟಿಹಾಳದ ಶುಖಮುನಿ ಶ್ರೀ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾತನ ರಥೋತ್ಸವಕ್ಕೆ ದೋಟಿಹಾಳ, ಕೇಸೂರು ಸೇರಿದಂತೆ ವಿವಿಧ ಸುತ್ತಮುತ್ತಲಿನ ನೂರಾರು ಗ್ರಾಮಗಳಿಂದ ಆಗಮಿಸಿದ ಭಕ್ತರು ನಾನಾ ತರಹದ ಹರಕೆಯನ್ನು ತಾತನ ಭಕ್ತಿಗೆ ಸಮರ್ಪಿಸಿದರು.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಜಾತ್ಯತೀತ, ಭಾವೈಕ್ಯತೆಯ ಜಾತ್ರೆ ಎಂದೇ ಹೆಸರಾದ ತಾಲೂಕಿನ ದೋಟಿಹಾಳದ ಅವಧೂತ ಶುಖಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಭಾನುವಾರ ಸಂಜೆ 6.15ಕ್ಕೆ ಸಹಸ್ರಾರು ಭಕ್ತರ ಜೈಕಾರದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.

ಶುಖಮುನಿ ತಾತನ ರಥೋತ್ಸವಕ್ಕೆ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಚಾಲನೆ ನೀಡಿದರು. ತಾತನ ರಥೋತ್ಸವಕ್ಕೆ ದೋಟಿಹಾಳ, ಕೇಸೂರು ಸೇರಿದಂತೆ ವಿವಿಧ ಸುತ್ತಮುತ್ತಲಿನ ನೂರಾರು ಗ್ರಾಮಗಳಿಂದ ಆಗಮಿಸಿದ ಭಕ್ತರು ನಾನಾ ತರಹದ ಹರಕೆಯನ್ನು ತಾತನ ಭಕ್ತಿಗೆ ಸಮರ್ಪಿಸಿದರು.

ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿದವು. ಬೆಳಿಗ್ಗೆ ರಥದ ಮುಂದೆ ಹೋಮ ಹವನಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಯಿತು.

ತಾಲೂಕಿನ ದೋಟಿಹಾಳ ಹಾಗೂ ಅನೇಕ ಗ್ರಾಮಗಳಿಂದ ಆಗಮಿಸಿದ ಭಕ್ತರು ಉರುಳು ಸೇವೆ, ದೀರ್ಘದಂಡ ನಮಸ್ಕಾರ ಸೇರಿದಂತೆ ಇನ್ನಿತರ ಧಾರ್ಮಿಕ ಮಾಡುತ್ತಿರುವುದು ಮಠದ ಅಂಗಳದಲ್ಲಿ ಕಂಡು ಬಂತು.

ರಥೋತ್ಸವ ಜರುಗುವ ಮುಂಚಿತವಾಗಿ ಪಲ್ಲಕ್ಕಿ ಉತ್ಸವವು ದೋಟಿಹಾಳ ಹಾಗೂ ಕೇಸೂರು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಥದ ಬೀದಿಗೆ ಬಂದು ಭೂಮಿ ತಾಯಿಗೆ ಬಲಿ ಅನ್ನದ ಸಮರ್ಪಣೆ ಮಾಡಲಾಯಿತು. ಈ ಮೂಲಕ ರಥದ ಬೀದಿಯಲ್ಲಿ ಪಲ್ಲಕ್ಕಿ ಸಂಚರಿಸಿತು.

ಜಯಘೋಷ: ರಥಬೀದಿಯಲ್ಲಿರುವ ಸಹಸ್ರಾರು ಭಕ್ತರು ಜೈ ಶುಖಮುನಿ, ಜೈ ಜೈ ಶುಖಮುನಿ, ಓಂ ನಮಃ ಶಿವಾಯ, ಶುಖಮುನಿ ಸ್ವಾಮಿ ಮಹಾರಾಜ್‌ ಕಿ ಜೈ ಸೇರಿದಂತೆ ಅನೇಕ ಜಯಘೋಷಗಳನ್ನು ಕೂಗುತ್ತಾ ರಥ ಎಳೆದು ತಾತನ ಕೃಪೆಗೆ ಪಾತ್ರರಾದರು.

ಕುಷ್ಟಗಿ ತಾಲೂಕು ಸೇರಿದಂತೆ ವಿವಿಧೆಡೆಯಿಂದ ರಾಜಕೀಯ ಪಕ್ಷಗಳ ಮುಖಂಡರು ಶುಖಮುನಿ ತಾತನ ಮಠಕ್ಕೆ ಭೇಟಿ ನೀಡಿ ತಾತನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಬಾಗಲಕೋಟೆ, ವಿಜಯಪುರ, ರಾಯಚೂರ, ಕೊಪ್ಪಳ, ಗದಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮತ್ತು ಸುತ್ತಮುತ್ತಲಿನ ಇಲಕಲ್, ಹುನಗುಂದ, ಹನಮಸಾಗರ, ಕಂದಗಲ್, ಮುದೇನೂರು, ತಾವರಗೇರಾ, ದೋಟಿಹಾಳ, ಕೇಸೂರ ಸುತ್ತಲಿನ ವಿವಿಧ ಗ್ರಾಮಗಳಿಂದ 50 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವ ಸಂದರ್ಭದಲ್ಲಿ ಕುಷ್ಟಗಿ ಪಿಎಸ್ಸೈ ಮುದ್ದುರಂಗಸ್ವಾಮಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಮರೇಗೌಡ ಪಾಟೀಲ ಭಯ್ಯಾಪುರ, ಹಸನಸಾಬ ದೋಟಿಹಾಳ, ತಹಸೀಲ್ದಾರ್ ರವಿ ಅಂಗಡಿ, ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ಮಾಜಿ ಜಿಪಂ ಸದಸ್ಯ ಕೆ.ಮಹೇಶ, ಅಶೋಕ ಬಳೂಟಗಿ, ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ, ಮಾಲತಿ ನಾಯಕ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ, ಗ್ರಾಮ ಲೆಕ್ಕಿಗ ಮೌನೇಶ ಮಡಿವಾಳರ, ಸಂಗಮೇಶ ನಾಗೂರು, ದೋಟಿಹಾಳ ಗ್ರಾಪಂ ಪಿಡಿಒ ಮುತ್ತಣ್ಣ, ಗ್ರಾಪಂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.