ಸಾರಾಂಶ
ಶಿವಮೊಗ್ಗ : ನ್ಯಾಯಾಲಯದ ತೀರ್ಪನ್ನು ಒಪ್ಪಲ್ಲ ಎಂದರೆ ನ್ಯಾಯಾಲಯಗಳನ್ನೇ ಮುಚ್ಚಿಬಿಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗುಡುಗಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಅತಿ ದೊಡ್ಡ ಗೌರವವಿದೆ. ಈ ಗೌರವವನ್ನು ಮುಖ್ಯಮಂತ್ರಿಗಳು ನೀಡಬೇಕು. ನಿಮ್ಮ ಪರವಾಗಿ ತೀರ್ಪು ಬಂದ್ರೆ ನ್ಯಾಯ, ನಿಮ್ಮ ವಿರುದ್ಧ ತೀರ್ಪು ಬಂದ್ರೆ ಅನ್ಯಾಯನಾ? ಕೋರ್ಟಿನ ತೀರ್ಪನ್ನೇ ತಪ್ಪು ಎಂದು ಹೇಳುವುದು ಸರಿಯಲ್ಲ ಎಂದು ಕುಟುಕಿದರು.
ಮುಡಾ ಹಗರಣ ಕುರಿತ ಆರೋಪದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪ ಮುಕ್ತರಾಗಲಿ ಜೊತೆಗೆ ನ್ಯಾಯಾಲಯದ ತೀರ್ಪಿಗೆ ಗೌರವ ಕೊಡಲಿ. ಸಿದ್ದರಾಮಯ್ಯ ಅವರ ಕುರಿತಂತೆ ಹೈಕೋರ್ಟ್ ನೀಡಿದ ತೀರ್ಪು ಬಹಳ ಮಹತ್ವ ಪಡೆದುಕೊಂಡಿದೆ. ವೈಯುಕ್ತಿಕವಾಗಿ ಅವರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ, ಭಗವಂತನ ಧಯೆಯಿಂದ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ನ್ಯಾಯ ಸಿಗಲಿ ಎಂದು ಆಶಿಸಿದರು.
ಈ ಪ್ರಕರಣದಲ್ಲಿ ಸಿದ್ದರಾಮಯ್ಯರವರ ಪತ್ನಿ ಮುಗ್ಧ ಹೆಣ್ಣು ಮಗಳು, ಅವರಿಗೆ ಅನ್ಯಾಯ ಆಗಬಾರದು, ಆ ಸಾತ್ವಿಕ ಹೆಣ್ಣು ಮಗಳಿಗೆ ಅನ್ಯಾಯ ಆಗಬಾರದು ಎಂದು ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. ಸಹಿ ಮಾಡು ಅಂದ್ರೆ ಮನೆಯವರು ಸಹಿ ಮಾಡ್ತಾರೆ ಹಾಗಾಗಿ ಈ ಪ್ರಕರಣದಲ್ಲಿ ಸಿದ್ದರಾಮಯ್ಯರ ಪತ್ನಿಗೆ ಅನ್ಯಾಯವಾಗಬಾರದು ಎಂದರು.
ನ್ಯಾಯಾಂಗದ ತೀರ್ಮಾನ ಒಪ್ಪುವುದಿಲ್ಲ ಎಂದು ಗೃಹಮಂತ್ರಿ, ಡಿಸಿಎಂ, ಸಂಪುಟದ ಮಂತ್ರಿಗಳು ಹೇಳುತ್ತಿದ್ದಾರೆ .ಯಾವುದೇ ತೀರ್ಪು ಬಂದರೂ ನಾನು ಒಪ್ಪುವುದಿಲ್ಲ ಎಂದು ರಾಜಕಾರಣಿಗಳು ಹೇಳಲಾರಂಭಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯನವರೇ ನ್ಯಾಯಾಂಗ ವ್ಯವಸ್ಥೆಗೆ ಅಪಚಾರ ಮಾಡಬೇಡಿ. ಕೋರ್ಟ್ ತೀರ್ಪು ಒಪ್ಪೋದಿಲ್ಲ ಎಂಬುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ. ನನ್ನ ಮೇಲೆ ಆರೋಪ ಬಂದಿತ್ತು. ಕೇಂದ್ರ ನಾಯಕರಿಗೆ ನಾನು ರಾಜೀನಾಮೆ ಕೊಡುವುದಾಗಿ ಪತ್ರ ಬರೆದಿದ್ದೆ. ಸಿದ್ದರಾಮಯ್ಯ ಡಿಕೆಶಿ ನೇತೃತ್ವದಲ್ಲಿ ಈಶ್ವರಪ್ಪ ರಾಜೀನಾಮೆ ಕೊಡಬೇಕು ಎಂದು ದೊಡ್ಡ ಪ್ರತಿಭಟನೆ ಮಾಡಿದರು. ಕೇಂದ್ರ ನಾಯಕರು ಒಪ್ಪಿಗೆ ಕೊಟ್ಟರು ನಾನು ರಾಜೀನಾಮೆ ಕೊಟ್ಟಿದ್ದೆ. ನಂತರ ಕೋರ್ಟ್ ತೀರ್ಪು ನಾನು ನಿರ್ದೋಷಿ ಎಂದು ಬಂತು. ನ್ಯಾಯಾಂಗಕ್ಕೆ ಯಾವುದೇ ಕಾರಣಕ್ಕೂ ಅಪಚಾರ ಮಾಡಬೇಡಿ ಎಂದು ಕುಟುಕಿದರು,
ಕಾನೂನು ಬದ್ಧವಾಗಿ ನಿಮಗೆ ಏನೇನು ಅವಕಾಶ ಇದೆ ಎಲ್ಲವನ್ನು ಮಾಡಿ. ಕೋರ್ಟ್ ತೀರ್ಪು ಒಪ್ಪುವುದಿಲ್ಲ ಎಂದರೆ ಎಲ್ಲರೂ ಇದನ್ನು ಶುರು ಮಾಡುತ್ತಾರೆ. ಯಡಿಯೂರಪ್ಪನವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟ ತಕ್ಷಣ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದರು. ಎಷ್ಟೇ ಪ್ರಭಾವಶಾಲಿಯಾಗಿದ್ದರು ಇವರು ಒಪ್ಪುವುದಿಲ್ಲ ಎಂದ ತಕ್ಷಣ ಕೋರ್ಟ್ ತೀರ್ಪನ್ನು ಬದಲಾಯಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಈ ರೀತಿ ಮಾಡಬೇಡಿ ಎಂದು ಪ್ರಾರ್ಥಿಸಿದರು.
ರಾಯಣ್ಣ-ಚೆನ್ನಮ್ಮನ ರಕ್ತ ಒಂದೇ: ಈಶ್ವರಪ್ಪ
ಬೆಂಗಳೂರು ಮನೆಗೆ ಯತ್ನಾಳು, ರಮೇಶ್ ಜಾರಕಿಹೊಳಿ ಸೇರಿದಂತೆ ತುಂಬಾ ಜನ ಸ್ನೇಹಿತರು ಮನೆಗೆ ಬಂದಿದ್ದರು. ರಾಜಕೀಯವಾಗಿ ಮಾತನಾಡಿದ್ದನ್ನು ಮಾಧ್ಯಮದವರ ಮುಂದೆ ಹೇಳಿಕೊಳ್ಳಲು ಸಾಧ್ಯವೇ? ಮಂಗಳವಾರ ಏನೂ ಬೆಳವಣಿಗೆ ನಡೆದಿಲ್ಲ.
ಕಳೆದ ಸೆ.20ರಂದು ಜಮಖಂಡಿ ತಾಲೂಕಿನ ಜಕನೂರು ಗ್ರಾಮದಲ್ಲಿ ಬಸವ ಕಲ್ಯಾಣಕ್ಕೆ ಒಳ್ಳೆದಾಗಲೆಂದು ಸ್ವಾಮೀಜಿ ಉಪವಾಸ ಮಾಡಿದ್ದರು. ಯತ್ನಾಳ್ ಹಾಗೂ ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು.
ಆ ಕಾರ್ಯಕ್ರಮದಲ್ಲಿ ಮುಂಬರುವ ದಿನಗಳಲ್ಲಿ ಈಶ್ವರಪ್ಪ ಸಿಎಂ ಆಗಬೇಕು ಎಂದು ಯತ್ನಾಳ್ ತಮ್ಮ ಮನಸ್ಸಿನ ಭಾವನೆ ಹೇಳಿದರು. ಸ್ವಾಮೀಜಿ ಕೂಡ ಹಿಂದೆ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದ್ದರು. ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮನ ರಕ್ತ ಒಂದೇ. ಹಾಗೆ ಈಶ್ವರಪ್ಪ ಮತ್ತು ಯತ್ನಾಳ್ ಸೇರಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಮಾಡಲಿ ಎಂದು ಆಶೀರ್ವಾದ ಮಾಡಿದ್ದಾರೆ. ಇನ್ನು, ರಾಯಣ್ಣ ಚೆನ್ನಮ್ಮ ಬ್ರಿಗೇಡ್ (ಆರ್‌ಸಿಬಿ)ಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಇದನ್ನು ಮುಂದುವರೆಸುವ ಮತ್ತು ಅದಕ್ಕೊಂದು ಶಕ್ತಿ ಕೊಡುವ ಕೆಲಸದ ಬಗ್ಗೆಯೂ ನಾವು ಚಿಂತಿಸುತ್ತಿದ್ದೇವೆ ಎಂದರು.