ಸಿದ್ದಗಂಗಾ ಶ್ರೀ ಆದರ್ಶಕ್ಕಾಗಿ ಬದುಕಿದ ಮಹಾತ್ಮ: ಅಮರೇಶ್ವರ ಶ್ರೀ

| Published : Apr 03 2024, 01:31 AM IST

ಸಿದ್ದಗಂಗಾ ಶ್ರೀ ಆದರ್ಶಕ್ಕಾಗಿ ಬದುಕಿದ ಮಹಾತ್ಮ: ಅಮರೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಕಾನುಕೇರಿ ಮಠದ ಸಮುದಾಯ ಭವನದಲ್ಲಿ ಶ್ರೀ ಸಿದ್ಧಗಂಗಾ ಶ್ರೀಗಳ ಜನ್ಮ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶ್ವ ದಾಸೋಹ ದಿನ ಕಾರ್ಯಕ್ರಮದಲ್ಲಿ ಘನ ಬಸವ ಅಮರೇಶ್ವರ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಜನಸಾಮಾನ್ಯರಂತೆ ಜನಿಸಿದ ಸಿದ್ಧಗಂಗಾ ಶ್ರೀಗಳು ಆಡಂಬರಕ್ಕಾಗಿ ಬದುಕದೇ ಆದರ್ಶಕ್ಕಾಗಿ ಬದುಕಿನ ಮಹಾತ್ಮರು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಸೋಮವಾರ ಪಟ್ಟಣದ ಕಾನುಕೇರಿ ಮಠದ ಸಮುದಾಯ ಭವನದಲ್ಲಿ ಅಕ್ಕನ ಬಳಗ ಹಾಗೂ ಸೊರಬ ಟೌನ್ ವೀರಶೈವ ಸಮಾಜ ಸಮಿತಿಯಿಂದ ಶ್ರೀ ಸಿದ್ದಗಂಗಾ ಶ್ರೀಗಳ ಜನ್ಮ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶ್ವ ದಾಸೋಹ ದಿನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಏಪ್ರಿಲ್ ೧ನೇ ತಾರೀಖನ್ನು ಮೂರ್ಖರ ದಿನವನ್ನಾಗಿ ಆಚರಿಸುವ ರೂಢಿಯಾಗಿದ್ದ ಸಮಯದಲ್ಲಿ ಆ ಏಪ್ರಿಲ್ ೧ನ್ನು ವಿಶ್ವ ದಾಸೋಹ ದಿನವನ್ನಾಗಿ ಆಚರಿಸುವ ಹಾಗೆ ಬದುಕಿದವರು ಸಿದ್ಧಗಂಗಾ ಶ್ರೀಗಳು. ಸರಿ ಸುಮಾರು ಹದಿನೈದು ಸಾವಿರ ಮಕ್ಕಳಿಗೆ ನಿತ್ಯ ಅನ್ನದಾನ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಎಂದರು.

ಸಾವಿರಾರು ಮಕ್ಕಳಿಗೆ ನಿತ್ಯ ತ್ರಿವಿಧ ದಾಸೋಹ ನಡೆಸುವುದು ಕಷ್ಟಕರ ಸಂಗತಿ. ಭಿಕ್ಷೆ ಮಾಡಿ ತಂದು ಮಕ್ಕಳಿಗೆ ನೀಡಬೇಕು. ಭಿಕ್ಷೆಗೆ ಹೋದಾಗ ಆಗುವ ಅಪಮಾನ, ಅನುಮಾನ, ಅವಮಾನ ಎಲ್ಲವನ್ನೂ ಸಹಿಸಿಕೊಂಡು ಅವರು ನೀಡುವ ಒಂದಷ್ಟು ಧನ, ಧಾನ್ಯ ಸಂಗ್ರಹಿಸಿ ಮಠದ ದಾಸೋಹ ನಡೆಸಬೇಕು. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ಸಮಾಜದ ಹಿತವೇ ತನ್ನ ಹಿತ ಎಂಬುದು ಅವರು ನಂಬಿದ್ದರು. ಸಮಾಜ ಸೇವೆಗಾಗಿಯೇ ತಮ್ಮನ್ನು ತಾವು ಸಮರ್ಪಸಿಕೊಂಡಿದ್ದರು ಎಂದರು.

ಮೂಡಿ ಹಾಗೂ ತುರಬಿಗುಡ್ಡ ವಿರಕ್ತ ಮಠದ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಬೇಕು. ಉತ್ತಮ ಸಂಸ್ಕಾರ ಸಿಗುವುದು ಮಠಗಳಲ್ಲಿ ಮಾತ್ರ. ಸಿದ್ಧಗಂಗಾ ಶ್ರೀಗಳು ಮಕ್ಕಳಿಗೆ ಕೇವಲ ಆಹಾರ ಅಷ್ಟೇ ಅಲ್ಲದೆ ಆಶ್ರಯ ವಿತ್ತು ಅವರಿಗೆ ಅಕ್ಷರವನ್ನೂ ಕಲಿಸಿದ್ದಾರೆ. ತ್ರಿವಿಧ ದಾಸೋಹಕ್ಕೆ ಮತ್ತೊಂದು ಭಾಷ್ಯ ಬರೆದವರು ಸಿದ್ಧಗಂಗಾ ಶ್ರೀಗಳಾಗಿದ್ದರು ಎಂದರು.

ಪ್ರಾಸ್ತಾವಿಕವಾಗಿ ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿದರು. ವೀರಶೈವ ಸಮಾಜದ ಟೌನ್ ಅಧ್ಯಕ್ಷ ಹೆಚ್. ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಯಮಾಲಾ ಅಣ್ಣಾಜಿಗೌಡ ನಿರೂಪಿಸಿದರುನೀ ಸಂದರ್ಭದಲ್ಲಿ ವಿಶ್ವ ದಾಸೋಹ ದಿನದ ಪ್ರಧಾನ ದಾಸೋಹಿಗಳಾದ ನಾಗರಾಜ ಗುತ್ತಿ ದಂಪತಿಗಳನ್ನು ಸನ್ಮಾನಿಸಲಾಯಿತು.

ಅಕ್ಕನ ಬಳಗ ಹಾಗೂ ರಾಗಸಂಗಮ ತಂಡದ ವತಿಯಿಂದ ಸಂಗೀತ ಕಾರ್ಯಕ್ರಮ ಹಾಗೂ ಸುರಭಿ ಮಹಿಳಾ ಯಕ್ಷ ಬಳಗ ವತಿಯಿಂದ ಕೆರೆಗೆಹಾರ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನವಾಯಿತು. ಕಾರ್ಯಕ್ರಮದ ನಂತರ ಮಹಾದಾಸೋಹ ನೆರವೇರಿತು.