ಹುಬ್ಬಳ್ಳಿ:
ಉಣಕಲ್ಲ ಶ್ರೀಸಿದ್ಧಪ್ಪಜ್ಜನವರು ಅಧ್ಯಾತ್ಮ ಲೋಕದ ಧ್ರುವಧಾರೆ. ಆರೂಢ ಆರೂಕ್ಷ ಅವಧೂತ ಅವಸ್ಥೆಯನ್ನು ಹೊಂದಿ ಜನಮನದ ಉನ್ನತಿ, ಶ್ರೇಯಸ್ಸಿಗಾಗಿ ಶ್ರಮಿಸಿದವರು. ಸಿದ್ಧಿಯ ಗದ್ದುಗೆಯನ್ನೇರಿದ ಮಹಾಪುರುಷರು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀ ಹೇಳಿದರು.ಸೋಮವಾರ ಸಂಜೆ ಉಣಕಲ್ಲ ಸಿದ್ಧಪ್ಪಜ್ಜನವರ ಮಠದ ಉದ್ಘಾಟನೆ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಾಕ್ ಸಿದ್ಧಿಯನ್ನು ಪಡೆದ ಸಿದ್ಧಪ್ಪಜ್ಜನವರ ನೂತನ ಮಠ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನುಷ್ಯ ಜೀವನವನ್ನು ಸುಂದರ ಶುದ್ಧಗೊಳಿಸುವುದೇ ಧರ್ಮದ ಗುರಿ. ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮ. ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣವಾಗಿದೆ. ವೀರಶೈವ ಧರ್ಮ ಅಂತರಂಗ, ಬಹಿರಂಗ ಶುದ್ಧಿಗೆ ಆದ್ಯತೆ ಕೊಟ್ಟಿದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಆಚಾರ್ಯರು, ಋಷಿ ಮುನಿಗಳು, ಸಂತ-ಶರಣರು ಕೊಟ್ಟ ಕೊಡುಗೆ ಅಪಾರವಾಗಿದೆ ಎಂದರು.ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಂಡು ನುಡಿ-ನಮನ ಸಲ್ಲಿಸಿದರು. ಅತಿಥಿಗಳಾಗಿ ಶಾಸಕ ಮಹೇಶ ಟೆಂಗಿನಕಾಯಿ, ಚೆನ್ನು ಪಾಟೀಲ, ಪ್ರಕಾಶ ಬೆಂಡಿಗೇರಿ, ಗಂಗಾಧರ ದೊಡ್ಡವಾಡ, ಶಿವಪ್ಪ ನೇಕಾರ ಭಾಗವಹಿಸಿದ್ದರು. ಉಣಕಲ್ಲ ಸದ್ಗುರು ಸಿದ್ಧೇಶ್ವರ ಸ್ವಾಮಿಯವರ ಹೊಸಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಹುಲಿಗೆಮ್ಮ ನಿರೂಪಿಸಿದರು.