ಸಿದ್ದಾಪುರ: ಈಶ್ವರ ದೇವರ ಅದ್ಧೂರಿ ರಥೋತ್ಸವ

| Published : Dec 29 2024, 01:20 AM IST

ಸಾರಾಂಶ

ಸಿದ್ದಾಪುರದ ಶ್ರೀ ಈಶ್ವರ ದೇವರ ರಥೋತ್ಸವ ಶನಿವಾರ ಸಂಜೆ ಅದ್ಧೂರಿಯಾಗಿ ನಡೆಯಿತು, ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಕಾರಟಗಿ: ತಾಲೂಕಿನ ಸಿದ್ದಾಪುರದ ಶ್ರೀ ಈಶ್ವರ ದೇವರ ರಥೋತ್ಸವ ಶನಿವಾರ ಸಂಜೆ ಅದ್ಧೂರಿಯಾಗಿ ನಡೆಯಿತು, ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಸಂಜೆ ದೇವಸ್ಥಾನದ ಮುಂದೆ ನಿಂತ ರಥಕ್ಕೆ ಬೆಳಗ್ಗೆಯಿಂದ ಅಲಂಕಾರ, ಪೂಜೆಗಳು ನಡೆದವು. ಸಂಜೆ ನಿಗದಿತ ಮುಹೂರ್ತಕ್ಕೆ ಹೆಬ್ಬಾಳದ ನಾಗಭೂಷಣ ಶಿವಾಚಾರ್ಯರು ಧ್ವಜ ಬೀಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಸಾವಿರು ಭಕ್ತರ ಜಯಘೋಷಗಳ ಮಧ್ಯೆ ರಥ ನಿಧಾನವಾಗಿ ಚಲಿಸಿತು. ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿ ಮುಸ್ಲಿಂ ಸಮುದಾಯದವರು ರಥಕ್ಕೆ 30 ಅಡಿ ಉದ್ದದ ರುದ್ರಾಕ್ಷಿ ಹಾರವನ್ನು ಮೆರವಣಿಗೆ ಮೂಲಕ ರಥಕ್ಕೆ ಸಮರ್ಪಿಸಿ ಸೌಹಾರ್ದ ಮೆರೆದರು.

ಗ್ರಾಮದ ಹಿರೇಮಠದ ಜಂಗಮ ಸಮುದಾಯ ರಥೋತ್ಸವಕ್ಕೆ ಕಳಸಾರೋಹಣ ಸೇವೆ, ಹಾಲುಮತ ಸಮಾಜದವರು ಹಗ್ಗದ ಸೇವೆ, ನಾಯಕ ಜನಾಂಗದವರು ರಥದ ಗಾಲಿನ ಹುಟ್ಟಿನ ಸೇವೆ ನೇರವೇರಿಸಿದರು.

ವಿವಿಧ ಸಮಾಜಗಳಿಂದ ರಥಕ್ಕೆ ಬೃಹತ್ ಹೂವಿನ ಹಾರಗಳನ್ನು ಸಮರ್ಪಿಸಲಾಯಿತು. ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ೧ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ 36ನೇ ವರ್ಷದ ಶ್ರೀ ಕಲಬುರಗಿ ಶರಣಬಸವೇಶ್ವರರ ಪುರಾಣ ಮಹಾ ಮಂಗಲೋತ್ಸವ ಜರುಗಿತು.

ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಶ್ರೀ ಈಶ್ವರ, ವೇಂಕಟೇಶ್ವರ, ಮಾರುತೇಶ್ವರ ಹಾಗೂ ಶರಣಬಸವೇಶ್ವರ ದೇವರಿಗೆ ಅಭಿಷೇಕ, ಪೂಜೆ, ಪುಷ್ಪಾಲಂಕಾರ ಸೇರಿದಂತೆ ನಾನಾ ಬಗೆಯ ಧಾರ್ಮಿಕ ಪೂಜಾ ಕಾರ್ಯಗಳನ್ನು ಹಿರೇಮಠದ ಉಮೇಶ ತಾತಾ, ವೀರಪ್ಪಯ್ಯಸ್ವಾಮಿ, ಸಾಲಗುಂದಿ ಗವಿಮಠದ ಜಡಿಮೂರ್ತಿಸ್ವಾಮಿ ನೇತೃತ್ವದಲ್ಲಿ ನಡೆಯಿತು.

ನಂತರ ೧೦೧ ಪೂರ್ಣಕುಂಭ ಹಾಗೂ ಕಳಸ-ಕನ್ನಡಿ ಹೊತ್ತ ಸುಮಂಗಲೆಯರೊಂದಿಗೆ ಮತ್ತು ಭಾಜಾ ಭಜಂತ್ರಿಗಳೊಂದಿಗೆ ಗಂಗೆಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಬಳಿಕ ಶ್ರೀ ಈಶ್ವರ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು‌ ಮೆರವಣಿಗೆ ಮಾಡಲಾಯಿತು. ಇದರ ಜೊತೆಗೆ ಈಶ್ವರ ದೇವಸ್ಥಾನದಿಂದ ಉಚ್ಛಾಯ ಮೆರವಣಿಗೆ ಮಾಡಲಾಯಿತು. ವೀರಗಾಸೆ ಹಾಗೂ ಶ್ರೀರಾಮನಗರದ ಸತೀಶ್ ಹಾಗೂ ಗ್ರಾಮದ ಕಸ್ತೂರಬಾ ಗಾಂಧಿ ಶಾಲೆಯ ವಿದ್ಯಾರ್ಥಿನಿಯರ ತಂಡದ ಕೋಲಾಟ ನೃತ್ಯ ಜನರ ಮನರಂಜಿಸಿತು. ಜಾತ್ರಾ ಮಹೋತ್ಸವದಲ್ಲಿ ಪಕ್ಕದ ಜಿಲ್ಲೆಗಳು ಹಾಗೂ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.