ಕಲ್ಯಾಣ ದಸರಾ ಉತ್ಸವಕ್ಕೆ ಸಿದ್ದರಾಮಯ್ಯ ಚಾಲನೆ

| Published : Oct 05 2024, 01:39 AM IST

ಕಲ್ಯಾಣ ದಸರಾ ಉತ್ಸವಕ್ಕೆ ಸಿದ್ದರಾಮಯ್ಯ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ದಸರಾ ಉತ್ಸವ-2024 ಉದ್ಘಾಟನೆ ಹಾಗೂ ಚತುಷ್ಪಥ ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯನ್ನು ಸಿಎಂ ಸಿದ್ಧರಾಮಯ್ಯ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು (ರಾಯಚೂರು ಜಿಲ್ಲೆ)

ಕಲ್ಮಲಾದಿಂದ ಸಿಂಧನೂರು ವರೆಗೆ 78.45 ಕಿಮೀ ಚತುಷ್ಪಥ ರಸ್ತೆ ಕಾಮಗಾರಿಯನ್ನು ₹1,695.85 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಯನ್ನು ಮೂರು ವರ್ಷದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದರು.

ಪಟ್ಟಣದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ದಸರಾ ಉತ್ಸವ-2024 ಉದ್ಘಾಟನೆ ಹಾಗೂ ಚತುಷ್ಪಥ ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಿ ಶುಕ್ರವಾರ ಮಾತನಾಡಿದರು.

ರಸ್ತೆ ಕಾಮಗಾರಿಯನ್ನು ನಿಯಮಗಳನ್ವಯ ಮಾಡಬೇಕು. ಲೋಪದೋಷಗಳು ಜರುಗಿದರೆ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಕಲಂ 371 (ಜೆ) ಜಾರಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಮೀಸಲಾತಿ ಹಾಗೂ ಸೌಲಭ್ಯ ದೊರೆಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಅವರ ನಿರಂತರ ಪ್ರಯತ್ನವೆ ಇದಕ್ಕೆ ಕಾರಣವಾಗಿದೆ. ವಿಶೇಷ ಮೀಸಲಾತಿಯಿಂದಾಗಿ ಸಾವಿರಾರು ಯುವಕರಿಗೆ ಉದ್ಯೋಗ ದೊರಕಿದೆ. ಇದರಲ್ಲಿ ಕೆಲ ಗೊಂದಲಗಳು ಹಾಗೂ ದೋಷಗಳು ಇರುವ ಬಗ್ಗೆ ತಿಳಿದು ಬಂದಿದ್ದು, ಶೀಘ್ರದಲ್ಲಿಯೇ ಅವುಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ದಸರಾ ಹಬ್ಬ ಯಾವುದೇ ಜಾತಿ, ಧರ್ಮ, ಭಾಷೆಗೆ ಸೀಮಿತವಾಗಿಲ್ಲ. ಅದು ಸರ್ವ ಜನಾಂಗದ ಹಬ್ಬವಾಗಿದೆ. ದಸರಾ ಹಬ್ಬ ನಾಡಿನ ಸಾಂಸ್ಕೃತಿಕ, ಹಿರಿಮೆ, ಗರಿಮೆಯನ್ನು ಸಾರುವ ಹಬ್ಬವಾಗಿದೆ. ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯಿದ್ದಂತೆ ಸಿಂಧನೂರು ತಾಲೂಕಿನಲ್ಲಿ ಅಂಬಾದೇವಿ ಶಕ್ತಿ ದೇವತೆಯಾಗಿದ್ದಾಳೆ. ಚಾಮುಂಡೇಶ್ವರಿ ಅವತಾರವೇ ಅಂಬಾದೇವಿ. ಇವರಿಬ್ಬರ ಕೃಪೆಯಿಂದಾಗಿ ಉತ್ತಮ ಮಳೆ-ಬೆಳೆಯಾಗಿದೆ. ಕೆರೆ-ಕಟ್ಟೆಗಳು ತುಂಬಿವೆ. ಇಡೀ ರಾಜ್ಯವೇ ಸಮೃದ್ಧಿಯಾಗಿದೆ ಎಂದರು.

ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 11,770 ಕೋಟಿ ರು. ಮಂಜೂರಾತಿ ನೀಡಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಕಳೆದ ಬಾರಿ 3 ಸಾವಿರ ಕೋಟಿ ನೀಡಲಾಗಿತ್ತು. ಈ ಬಾರಿ 5 ಸಾವಿರ ಕೋಟಿ ಮಂಜೂರು ಮಾಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ತೊಲಗಬೇಕು. ಸಂಪೂರ್ಣ ಅಭಿವೃದ್ಧಿಯಾಗಬೇಕು ಎಂಬ ಆಶೆಯವನ್ನು ಹೊಂದಲಾಗಿದೆ. ಒಟ್ಟು 1 ಲಕ್ಷ 9 ಸಾವಿರ ಖಾಲಿ ಹುದ್ದೆಗಳು ರಾಜ್ಯದಲ್ಲಿವೆ. ಅದರಲ್ಲಿ 70 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾನೂನು ಮತ್ತು ಸಂಸದಿಯ ಹಾಗೂ ಪ್ರವಾಸ್ಯೋದ್ಯಮಿ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಕಂಕಣಬದ್ಧರಾಗಿದ್ದಾರೆ.

ಅನ್ನಭಾಗ್ಯ ಯೋಜನೆಯಿಂದ ಬಡವರು ನಿಶ್ಚಿಂತೆಯಿಂದ ಎರಡೊಪ್ಪತ್ತು ಊಟ ಮಾಡುತ್ತಿದ್ದಾರೆ. ಪಂಚ ಗ್ಯಾರಂಟಿಗಳ ಜಾರಿಯಿಂದಾಗಿ ಬಡಕುಟುಂಬದವರು ಮಧ್ಯಮ ಕುಟುಂಬಕ್ಕೆ ಬಡ್ತಿ ಹೊಂದಿದ್ದಾರೆ. ಅವರು ನುಡಿದಂತೆ ನಡೆದಿದ್ದಾರೆ. ಕ್ರಾಂತಿಕಾರಕ ನಿರ್ಧಾರಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿವೆ. ದೇವರ ಪೂಜೆಯನ್ನು ಅವರು ಮಾಡುತ್ತಾರೋ ಇಲ್ಲವೋ ಗೋತ್ತಿಲ್ಲ. ಆದರೆ ಜನರ ಸೇವೆ ಜನಾರ್ಧನ ಸೇವೆಯೆಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಂಧನೂರಿನಲ್ಲಿ ದಸರಾ ಉತ್ಸವ ಹಾಗೂ ಅದ್ಧೂರಿ ಮೆರವಣಿಗೆ ಎಲ್ಲರ ಗಮನ ಸೆಳೆದಿದೆ. ದಸರಾ ಉತ್ಸವ ಸಿದ್ದರಾಮಯ್ಯ ಅವರ ನಸೀಬನ್ನು ಬದಲಾಯಿಸುತ್ತದೆ ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಮೈಸೂರಿನಲ್ಲಿ ಚಾಂಮುಡೇಶ್ವರಿಯ ಆರಾಧನೆಗೆ ದಸರಾ ಮಹೋತ್ಸವವನ್ನು ಆಚರಿಸುತ್ತಿದ್ದು, ಈಗ ಅದು ನಾಡಹಬ್ಬವಾಗಿ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಈ ಭಾಗದ ಆರಾಧ್ಯ ದೈವ ವಿವಿಧ ರಾಜ್ಯದ ಜನರಿಂದ ಪೂಜಿಸಲ್ಪಡುವ ಅಂಬಾದೇವಿಯ ಆರಾಧನೆಯೊಂದಿಗೆ ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ದಸರಾ ಮಹೋತ್ಸವವನ್ನು ಆಚರಿಸುತ್ತಿದ್ದು, ಈ ಉತ್ಸವಕ್ಕೆ ಸ್ಥಳೀಯ ವಿರೋಧ ಪಕ್ಷದ ನಾಯಕರು, ಸಂಘ-ಸಂಸ್ಥೆಗಳ ಮುಖಂಡರು, ಅಧಿಕಾರಿ ವರ್ಗದವರು ಸಕರಾತ್ಮಕವಾಗಿ ಸ್ಪಂದಿಸಿರುವುದರಿಂದ ದೊಡ್ಡ ಹಬ್ಬವಾಗಿ ಆಚರಿಸಲು ಸಾಧ್ಯವಾಗಿದೆ ಎಂದು ಅಭಿನಂದಿಸಿದರು.

ಈ ವೇಳೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ, ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ರಾಘವೇಂದ್ರ ಹಿಟ್ನಾಳ, ನಾಗರಾಜ ಸಿರುಗುಪ್ಪಾ, ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಎ.ವಸಂತಕುಮಾರ, ಮಾಜಿ ಶಾಸಕರಾದ ಬಯ್ಯಾಪುರ ಅಮರೇಗೌಡ, ವೆಂಕಟರಾವ್ ನಾಡಗೌಡ, ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮುಖಂಡರಾದ ವಸಂತ ಕುಮಾರ, ಬಸವರಾಜ ಪಾಟೀಲ್ ಇಟಗಿ, ಪಾಮಯ್ಯ ಮುರಾರಿ, ಶರಣೇಗೌಡ ಬಯ್ಯಾಪುರ ಉಪಸ್ಥತರಿದ್ದರು.

17 ಸಾವಿರ ಹುದ್ದೆಗಳ ಭರ್ತಿಗೆ ತಯಾರಿ

ಕಲ್ಯಾಣ ಕರ್ನಾಟಕ ಭಾಗದಲ್ಲಿ 17 ಸಾವಿರ ಹುದ್ದೆಗಳ ಭರ್ತಿಗೆ ತಯಾರಿ ನಡೆದಿದೆ. 5 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯೂ ನಡೆದಿದೆ. ಮಲ್ಲಿಕಾರ್ಜು ಖರ್ಗೆ ಮತ್ತು ಧರ್ಮಸಿಂಗ್ ಅವರು ಕಲ್ಯಾಣ ಕರ್ನಾಟಕದ ಪ್ರಗತಿಯ ಬಗ್ಗೆ ಚಿಂತನೆ ಮಾಡದಿದ್ದರೆ ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣ ಮತ್ತು ಸಹಸ್ರಾರು ಉದ್ಯೋಗಗಳು ಲಭಿಸುತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದರು.-------