ಸಾರಾಂಶ
ಪಾದಯಾತ್ರೆ ನಡೆಸುವ ಉಭಯ ಪಕ್ಷಗಳವರು ಮುಡಾ ಹಗರಣ ಯಾರ ಅವಧಿಯಲ್ಲಿ ಆಗಿದ್ದು, ಎಂಬುದನ್ನು ಜನರಿಗೆ ತಿಳಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜಕೀಯ ದುರುದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್ ನಡೆಸುವ ಪಾದಯಾತ್ರೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಈ ಕುರಿತು ಕಾನೂನು ಚೌಕಟ್ಟು ಬೇರೆಯೇ ಇದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.ಮಂಗಳೂರಿನ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಮಾದರಿಯಾಗಿರುವ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ, ಜೆಡಿಎಸ್ ನಡೆಸುತ್ತಿರುವ ರಾಜಕೀಯದ ಆಟಕ್ಕೆ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರಾದ ನಾವು ಹೆದರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಮಾಡುತ್ತಾ ಬಂದ ಜನತಾ ಪರಿವಾರವಾದ ಬಿಜೆಪಿ ಪಕ್ಷ ಹಾಗೂ ರೈತನ ಮಗ ಎಂದು ಹೇಳಿಕೊಂಡು ಫೈವ್‌ಸ್ಟಾರ್ ಹೊಟೇಲ್‌ನಲ್ಲಿ ಕುಳಿತು ಕಡತಗಳಿಗೆ ಸಹಿ ಹಾಕುವ ಕುಮಾರಸ್ವಾಮಿಯವರ ಜೆಡಿಎಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗುರಿಯಾಗಿಸುವ ಹುನ್ನಾರ ನಡೆಯುತ್ತಿದೆ ಎಂದರು.ಸಿಎಂ ಜೊತೆ ಜನತೆ ಇದೆ: ಪಾದಯಾತ್ರೆ ನಡೆಸುವ ಉಭಯ ಪಕ್ಷಗಳವರು ಮುಡಾ ಹಗರಣ ಯಾರ ಅವಧಿಯಲ್ಲಿ ಆಗಿದ್ದು, ಎಂಬುದನ್ನು ಜನರಿಗೆ ತಿಳಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಆಗ್ರಹಿಸಿದರು.
ಬಿಜೆಪಿ ಅವಧಿಯಲ್ಲಿ ಆಗಿರುವ ಹಗರಣದ ಆರೋಪವನ್ನು ಸಿದ್ಧರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮಾಡುತ್ತಿರುವುದು ಸ್ಪಷ್ಟವಾಗಿರುವುದರಿಂದ ಜನತೆ ಖಂಡಿತಾ ನಿಮ್ಮನ್ನು ಕ್ಷಮಿಸಲಾರರು. ಸಿದ್ಧರಾಮಯ್ಯ ಸರ್ಕಾರದ ಜತೆ ಕಾಂಗ್ರೆಸ್ ಪಕ್ಷ ಹಾಗೂ ಜನತೆ ಇದ್ದಾರೆ ಎಂದು ಅವರು ಹೇಳಿದರು.ಬಿಜೆಪಿ ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಸರ್ಕಾರದ ಜೊತೆ ನಿಂತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.
ಮುಖಂಡರಾದ ನವೀನ್ ಡಿಸೋಜಾ, ವಿನಯರಾಜ್, ಎಂ.ಎಸ್. ಮುಹಮ್ಮದ್, ಪ್ರಕಾಶ್ ಸಾಲಿಯಾನ್, ಶುಭೋದಯ ಆಳ್ವ, ನೀರಜ್‌ಪಾಲ್, ಟಿ.ಕೆ. ಸುಧೀರ್, ವಿಕಾಸ್ ಶೆಟ್ಟಿ ಮತ್ತಿತರರಿದ್ದರು.