ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನವಿರೋಧಿ: ದತ್ತಾತ್ರಿ

| Published : Apr 02 2024, 01:06 AM IST

ಸಾರಾಂಶ

ಶಾಸಕರಿಗೆ ಅನುದಾನ ನೀಡಿಲ್ಲ. ತನ್ನ ಸಮಸ್ಯೆಯನ್ನು ಮುಚ್ಚಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದೆ ಎಂದು ದತ್ತಾತ್ರಿ ಎಸ್. ವಾಗ್ದಾಳಿ ನಡೆಸಿದರು.

ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೧೦ ತಿಂಗಳಿನಲ್ಲಿಯೇ ಜನವಿರೋಧಿ ಸರ್ಕಾರ ಎಂದು ಮನೆಮಾತಾಗಿದೆ. ನರೇಂದ್ರ ಮೋದಿ ಜನತೆಗೆ ನೀಡಿದ ಆಶ್ವಾಸನೆಯನ್ನು ಶೇ. ೯೯ರಷ್ಟು ಪೂರ್ಣಗೊಳಿಸಿದ್ದಾರೆ. ಮೂರನೆಯ ಬಾರಿಗೆ ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿಸಲು ನಾವೆಲ್ಲರೂ ಪಣ ತೋಡಬೇಕು ಎಂದು ರಾಜ್ಯ ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ ಎಸ್. ಮನವಿ ಮಾಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ೨೮ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸವಿದ್ದು, ಕೇಂದ್ರ ಸರ್ಕಾರ ರೈತರು, ಯುವಕರು, ಮಹಿಳೆಯರು ಮತ್ತು ಬಡವರಿಗೆ ಹಲವು ಯೋಜನೆಯನ್ನು ನೀಡಿದೆ. ನಮ್ಮ ಬಳಿ ಸಾಕಷ್ಟು ಬ್ರಹ್ಮಾಸ್ತ್ರಗಳನ್ನು ಮೋದಿ ನೀಡಿದ್ದಾರೆ ಎಂದರು.

ದಲಿತ ಸಮುದಾಯಕ್ಕೆ ಮೀಸಲಿಟ್ಟ ₹೧೨ ಸಾವಿರ ಕೋಟಿ ಕಳೆದ ವರ್ಷದ ಅನುದಾನ ಮತ್ತು ಈ ವರ್ಷದ ₹೨೪ ಸಾವಿರ ಕೋಟಿಯನ್ನು ಗ್ಯಾರಂಜಿ ಯೋಜನೆಗೆ ಬಳಸಿ, ದಲಿತರ ವಿರೋಧಿ ಸರ್ಕಾರವಾಗಿದ್ದು, ರಸ್ತೆ ಅಭಿವೃದ್ಧಿ ಕಾರ್ಯಗಳೆಲ್ಲವೂ ನನೆಗುದಿಗೆ ಬಿದ್ದಿದೆ. ಶಾಸಕರಿಗೆ ಅನುದಾನ ನೀಡಿಲ್ಲ. ತನ್ನ ಸಮಸ್ಯೆಯನ್ನು ಮುಚ್ಚಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಠಗಳ ಜಿಲ್ಲಾ ವಿನೋಧ ನಾಯ್ಕ ರಾಯಲಕೇರಿ, ಸಹ ಸಂಯೋಜಕ ರಾಘವ ಭಟ್ಟ ಸುಂಕಸಾಳ, ಜಿಲ್ಲಾ ವಕ್ತಾರ ಸದಾನಂದ ಭಟ್ಟ, ಮಾಧ್ಯಮ ಸಂಯೋಜಕ ಡಾನಿ ಇದ್ದರು.ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲ್ಲಿಸ್ತೇವೆ...

ಪಕ್ಷದ ಪ್ರಮುಖರಿಗೆ ಬೇರೆ ಬೇರೆ ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ನಿರ್ವಹಿಸಲಾಗಿದೆ. ಸಿದ್ದಾಪುರದ ಕೆ.ಜಿ.ನಾಯ್ಕ ಅವರಿಗೆ ಕುಮಟಾ ಮಂಡಳದ ಜವಾಬ್ದಾರಿ ಇದೆ. ಆ ಕಾರಣಕ್ಕೆ ಅವರು ಸಿದ್ದಾಪುರದ ಸಮಾವೇಶಕ್ಕೆ ಆಗಮಿಸಿಲ್ಲ. ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರಕ್ಕೆ ಬರಲಿದ್ದಾರೆ ಸಂಸದ ಹೆಗಡೆ

ಸಂಸದ ಅನಂತಕುಮಾರ ಹೆಗಡೆ ಕಳೆದ ೩೫ ವರ್ಷಗಳಿಂದ ಸಂಘಟನೆಯ ಜತೆಯಿದ್ದವರು. ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆ ಪ್ರಚಾರಕ್ಕೆ ತೆರಳಲಿದ್ದಾರೆ. ಅಲ್ಲದೇ, ನಮ್ಮ ಅಭ್ಯರ್ಥಿ ಗೆಲುವಿಗೆ ಸಂಸದರು ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ. ಶಿವರಾಮ ಹೆಬ್ಬಾರ ಅವರಿಗೆ ಪ್ರತಿ ಕಾರ್ಯಕ್ರಮಕ್ಕೂ ಖುದ್ದಾಗಿ ನಾನೇ ಆಹ್ವಾನ ನೀಡಿದ್ದೇನೆ. ಆಹ್ವಾನ ನೀಡಿಲ್ಲ ಎಂಬ ಅವರ ಹೇಳಿಕೆಯನ್ನು ನಾನು ಒಪ್ಪಲು ಸಾಧ್ಯವಿಲ್ಲ. ಅವರ ಮುಂದಿನ ನಡೆಯ ಕುರಿತು ರಾಜ್ಯದ ಹಿರಿಯರು ನೋಡಿಕೊಳ್ಳುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ತಿಳಿಸಿದರು.