ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಶ್ರೀ ಸಿದ್ಧೇಶ್ವರ ಅಪ್ಪನವರ ಪ್ರವಚನ ಕೇಳದೆ ಇರುವ ವ್ಯಕ್ತಿಗಳು ಯಾರೂ ಇಲ್ಲ. ಅವರು ಭೌತಿಕವಾಗಿ ನಮ್ಮ ಜೊತೆಗೆ ಇಲ್ಲ. ಆದರೆ ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ ಶಿಕ್ಷಣ ಹಾಗೂ ವಿಜ್ಞಾನ ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೮ನೇ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಒಮ್ಮೆ ಆಸ್ಟ್ರೇಲಿಯಾಗೆ ಹೋದಾಗ ಅವರ ಪ್ರವಚನಕ್ಕೆ ಹೋಗಿದ್ದೆ. ಅಲ್ಲಿ ಸುಮಾರು ಐದು ಸಾವಿರ ಜನ ಅವರ ಮಾತುಗಳನ್ನು ಕೇಳಲು ಬಂದಿದ್ದು ನನ್ನಲ್ಲಿ ಆಶ್ಚರ್ಯವನ್ನುಂಟು ಮಾಡಿತ್ತು. ನಮ್ಮ ದೇಶ ಮಾತ್ರವಲ್ಲ ಬೇರೆ ದೇಶಗಳಲ್ಲಿಯೂ ಅವರ ಪ್ರಭಾವ ಸಾಕಷ್ಟಿದೆ. ಅಂತಹ ಏನನ್ನು ಯಾರಿಂದಲೂ ನಿರೀಕ್ಷೆ ಮಾಡದೆಯೇ ಬದುಕಿ, ಅತ್ಯಂತ ಸರಳ ಸಜ್ಜನಿಕೆಯಿಂದ ಬದುಕಿ ಇಡೀ ಜಗತ್ತಿಗೆ ಜ್ಞಾನ ದಾಸೋಹ ಮಾಡಿದ ಶ್ರೀ ಸಿದ್ಧೇಶ್ವರ ಅಪ್ಪನವರು ನಮ್ಮನ್ನ ಅಗಲಿದ ಮೇಲೆಯೂ ಇಂದಿಗೂ ನಮ್ಮಲ್ಲಿಯೇ ಆಳವಾಗಿ ಉಳಿದುಕೊಂಡಿದ್ದಾರೆ. ಅವರ ತತ್ವಗಳನ್ನು ಪಾಲಿಸುವ ಮೂಲಕ, ಅವರು ಕಲಿಸಿದ ಪಾಠಗಳನ್ನು, ಅವರ ಹಾದಿಯಲ್ಲಿ ನಾವು ಸಾಗುವ ಮೂಲಕ ಅವರಿಗೆ ಗುರು ನಮನ ಸಲ್ಲಿಸಬೇಕಾಗಿದೆ ಎಂದರು.ಮಾಜಿ ಸಚಿವ ಮುರಗೇಶ ನಿರಾಣಿ ಮಾತನಾಡಿ, ವಿಜಯಪುರ ಎಂದರೆ ಇಂದು ಜ್ಞಾನಯೋಗಾಶ್ರಮ ಎನ್ನುವಷ್ಟರ ಮಟ್ಟಿಗೆ ನಮ್ಮ ಪೂಜ್ಯ ಶ್ರೀಗಳಾದ ಸಿದ್ಧೇಶ್ವರ ಸ್ವಾಮೀಜಿಯವರು ಪ್ರಭಾವಿಸಿದ್ದಾರೆ. ಅವರಂತೆ ಬೇರೆ ಯಾರೂ ಆಗಲೂ ಸಾಧ್ಯವಿಲ್ಲ. ಒಬ್ಬ ಸಂತನಾಗಿ ಯಾವ ರೀತಿ ಇರಬೇಕು ಮತ್ತು ನಮ್ಮ ಜೀವನದಲ್ಲಿ ನಾವು ಹೇಗೆ ಬದುಕಬೇಕು ಎನ್ನುವುದನ್ನು ಶ್ರೀಗಳು ನಮ್ಮೆಲ್ಲರಿಗೂ ಕಲಿಸಿಕೊಟ್ಟು ಹೋಗಿದ್ದಾರೆ. ಅವರು ಕಲಿಸಿದಂತೆ ನಾವು ಬದುಕಿದರೆ ಸಾಕು ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಶಾಸಕ ಬಿ. ವೈ. ವಿಜಯೇಂದ್ರ ಮಾತನಾಡಿ, ಜ್ಯೋತಿ ತಾನು ಯಾವಾಗಲೂ ಪರರಿಗೆ ಬೆಳಕು ನೀಡುತ್ತದೆ. ಅದರಂತೆ ಇಡೀ ಜಗತ್ತಿನಾದ್ಯಂತ ತನ್ನ ಭಕ್ತ ಸಂಕುಲಕ್ಕೆ ಜ್ಞಾನದ ಜ್ಯೋತಿಯನ್ನು ನೀಡಿದಂತವರು ಶ್ರೀ ಸಿದ್ಧೇಶ್ವರ ಅಪ್ಪನವರು ಎಂದು ಹೇಳಿದರು.ಸೃಷ್ಟಿಯಲ್ಲಿ ಭೂಮಿ ಬಹಳ ವಿಶಿಷ್ಟವಾದದ್ದು. ಈ ಭೂಮಿಯ ಮೇಲೆ ಅನೇಕ ಜೀವ ಸಂಕುಲಗಳು ಹುಟ್ಟಿ ಜನ್ಮ ತಾಳುತ್ತವೆ. ಮಾನವ ಜನ್ಮ ದೊಡ್ಡದು ಎಂದು ದಾಸರ ಪದಗಳಲ್ಲಿ ನಾವು ಕಾಣುತ್ತೇವೆ. ಇಂತಹ ಭೂಮಿಯ ಮೇಲೆ ಕೆಲವೇ ಕೆಲವು ಶ್ರೇಷ್ಠ ಶಕ್ತಿಗಳು ಹುಟ್ಟುತ್ತಾರೆ. ಅದರಂತೆ ಈ ನಾಡಿನ ಮತ್ತು ಜಗತ್ತಿನ ಕೋಟ್ಯಂತರ ಜನಕ್ಕೆ ಜ್ಞಾನದ ಬೆಳಕು ನೀಡಿದಂತಹ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಅಪ್ಪನವರೂ ಒಬ್ಬರು ಎಂದು ಹೇಳಿದರು.
ಸಿಂದಗಿ ಸಾರಂಗ ಮಠದ ಷ. ಬ್ರ ಪ್ರಭುಸಾರಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ದೆಹಲಿ ಅಖಿಲ ಭಾರತೀಯ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶಂಕರಾನಂದ, ಇಸ್ರೋ ಮಾಜಿ ಅಧಕ್ಷ ಪದ್ಮಶ್ರೀ ಎ.ಎಸ್.ಕಿರಣ ಕುಮಾರ, ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮೀಜಿ, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಬಸವರಾಜ ಕವಲಗಿ, ಹರ್ಷಾನಂದ ಮಹಾಸ್ವಾಮಿಗಳು ಮುಂತಾದವರು ಇದ್ದರು.ಕಾರ್ಯಕ್ರಮದಲ್ಲಿ ಪದ್ಮಶ್ರೀ ಎ. ಎಸ್. ಕಿರಣ ಕುಮಾರ ಗುರುವೇ ದೇವರು ಪುಸ್ತಕ ಬಿಡುಗಡೆ ಮಾಡಿದರು.