ಪಟ್ಟಣದ ಯುಕೆಪಿ ಕ್ಯಾಂಪಿನಲ್ಲಿರುವ ಸ್ಪಂದನ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ವರ್ಷದ ನುಡಿ ನಮನ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ಯುಕೆಪಿ ಕ್ಯಾಂಪಿನಲ್ಲಿರುವ ಸ್ಪಂದನ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ವರ್ಷದ ನುಡಿ ನಮನ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.ಸಿದ್ದೇಶ್ವರ ಸ್ವಾಮೀಜಿಯವರ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಬೆಳಗ್ಗೆ ಪ್ರಾರ್ಥನೆ ಮತ್ತು ಧ್ಯಾನದೊಂದಿಗೆ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.
ಶಾಲೆಯ ಗುರುಮಾತೆ ಜಯಶ್ರೀ ಮಡಿವಾಳರ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನುಡಿಯ ಮೂಲಕ ಸಮಾಜವನ್ನು ಜಾಗೃತಿಗೊಳಿಸಿದ ಮಹಾನ್ ಚಿಂತಕ. ಅವರ ತತ್ವಗಳು ಇಂದಿನ ಸಮಾಜಕ್ಕೂ ಅಷ್ಟೇ ಪ್ರಸ್ತುತ. ಸ್ವಾಮೀಜಿಗಳು ಕೇವಲ ಒಬ್ಬ ಸನ್ಯಾಸಿ ಮಾತ್ರವಲ್ಲ, ಅವರು ನಮ್ಮ ಕಾಲದ ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಮಾನವೀಯ ಮೌಲ್ಯಗಳ ಜೀವಂತ ಮಾದರಿಯಾಗಿದ್ದರು. ಅವರ ಜೀವನವೇ ಒಂದು ಉಪದೇಶವಾಗಿತ್ತು. ಅವರ ಮಾತುಗಳಲ್ಲಿ ಅಲಂಕಾರ ಇರಲಿಲ್ಲ, ಆದರೆ ಅರ್ಥದ ಆಳವಿತ್ತು. ಅವರ ನಡೆನುಡಿಯಲ್ಲಿ ಆಡಂಬರ ಇರಲಿಲ್ಲ, ಆದರೆ ಆದರ್ಶವಿತ್ತು. ಸರಳವಾಗಿ ಬದುಕಿ, ಸತ್ಯವಾಗಿ ಯೋಚಿಸಿ, ಸೇವೆಯ ಮೂಲಕ ಜೀವನ ಸಾರ್ಥಕಗೊಳಿಸಿ ಎಂಬ ಸಂದೇಶವನ್ನು ಅವರು ತಮ್ಮ ಜೀವನದ ಮೂಲಕ ನಮಗೆ ಕಲಿಸಿದರು ಎಂದು ಹೇಳಿದರು. ಹಲವಾರು ವಿದ್ಯಾರ್ಥಿಗಳು ಸ್ವಾಮಿಜೀ ಅವರ ಛದ್ಮವೇಶ ಧರಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಶ್ಲೋಕ, ವಚನಗಳು, ದೇವರ ಭಕ್ತಿಗೀತೆಗಳು ಮೂಡಿಬಂದಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮುರಿಗೆಣ್ಣ ದೇಸಾಯಿ, ವ್ಯವಸ್ಥಾಪಕ ಮಲ್ಲಿಕಾರ್ಜುನ ಗುತ್ತೇದಾರ, ಶಿಕ್ಷಕಿಯರಾದ ವಿಜಯಲಕ್ಷ್ಮೀ ಪಾಟೀಲ, ಪ್ರಮೀಳಾ ನೂಲಿನ್, ಜಯಶ್ರೀ ಮಡಿವಾಳರ, ಆಸ್ಮಾ ಆವಟಿ, ಭಾಗ್ಯಶ್ರೀ, ವನಿತಾ, ಕೌಸರ ಬೇಗಂ, ಕಾವೇರಿ ಪಾಟೀಲ, ನೀಲಾಶ್ರೀ, ಸೌಮ್ಯ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.