ಸಿದ್ಧಗಂಗಾಶ್ರೀಗಳ ದಾಸೋಹ ಸೇವೆ ಆದರ್ಶನೀಯ: ಸಂದೇಶ್‌

| Published : Jul 24 2024, 12:15 AM IST

ಸಾರಾಂಶ

12ನೇ ಶತಮಾನದ ಶಿವಶರಣರ ಕಾಯಕ ಹಾಗೂ ದಾಸೋಹದ ಪರಿಕಲ್ಪನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾಡಿನಾದ್ಯಂತ ಶರಣರ ಚಿಂತನೆಯನ್ನು ಪಸರಿಸಿದ ಪೂಜ್ಯ ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಈ ದಾಸೋಹ ಹುಣ್ಣಿಮೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಕೆಲಸವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪೂಜ್ಯಶ್ರೀ ಶಿವಕುಮಾರ ಸ್ವಾಮೀಜಿ ಅವರು ತಮ್ಮ 111 ವರ್ಷಗಳ ಕಾಲ ನಡೆಸಿದ ದಾಸೋಹ ಸೇವೆ ಇಡೀ ವಿಶ್ವಕ್ಕೆ ಆದರ್ಶನೀಯವಾಗಿದೆ ಎಂದು ಹಿಂದುಳಿದ ವರ್ಗಗಳ ವೇದಿಕೆಯ ಜಿಲ್ಲಾಧ್ಯಕ್ಷ ಎಲ್ ಸಂದೇಶ್ ಹೇಳಿದರು.

ನಗರದ ಶ್ರೀಶಿವಕುಮಾರ ಮಹಾ ಸ್ವಾಮೀಜಿ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ಸಿದ್ಧಗಂಗಾಶ್ರೀ ಸೇವಾ ಸಮಿತಿಯಿಂದ ಆಯೋಜಿಸಿದ್ದ ದಾಸೋಹ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

12ನೇ ಶತಮಾನದ ಶಿವಶರಣರ ಕಾಯಕ ಹಾಗೂ ದಾಸೋಹದ ಪರಿಕಲ್ಪನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾಡಿನಾದ್ಯಂತ ಶರಣರ ಚಿಂತನೆಯನ್ನು ಪಸರಿಸಿದ ಪೂಜ್ಯ ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಈ ದಾಸೋಹ ಹುಣ್ಣಿಮೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು.

ಶ್ರೀಶಿವಕುಮಾರ ಮಹಾಸ್ವಾಮೀಜಿಗಳು ಅನ್ನ ಅರಿವು ಕೊಟ್ಟವರು ಮತ್ತು ಸ್ವಾಮೀಜಿಗಳು ಯಾವ ರೀತಿ ಇರಬೇಕು ಎಂದು ಸಮಾನತೆಯ ಸಾಕ್ಷರತೆ ಸಾಮರಸ್ಯ ತಿಳಿಸಿಕೊಟ್ಟ ಮಹಾ ಸ್ವಾಮೀಜಿಯವರು ನಮಗೆಲ್ಲಾ ಆದರ್ಶಪ್ರಾಯರಾಗಿದ್ದಾರೆ. ಅಂತಹ ವಿಶ್ವಮಾನವರ ನೆನಪನ್ನು ಮಾಡಿಕೊಳ್ಳುತ್ತಾ ಅವರ ಹೆಸರಿನಲ್ಲಿ ದಾಸೋಹ ಹುಣ್ಣಿಮೆ ಕಾರ್ಯಕ್ರಮ ಆಯೋಜಿಸಿದ್ದು ಇತರರಿಗೆ ಮಾರ್ಗದರ್ಶನ ನೀಡಿದ ಹಾಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ಶಿವಕುಮಾರ್ ಮಹಾಸ್ವಾಮೀಜಿಯವರಿಗೆ ಭಾರತ ರತ್ನ ನೀಡುವಂತೆ ಹೋರಾಟ ಮಾಡುತ್ತಿದ್ದೇವೆ. ಕಳೆದ ಹತ್ತು ವರ್ಷಗಳಿಂದ ಕರ್ನಾಟಕದ ಯಾವ ವ್ಯಕ್ತಿಗೂ ಭಾರತ ರತ್ನ ನೀಡದಿರುವುದು ವಿಷಾದನೀಯ. ಯಾವುದೇ ಸರ್ಕಾರವಿರಲಿ ಉತ್ತಮ ಮಹನೀಯರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವುದರಿಂದ ಪ್ರಶಸ್ತಿಗಳ ಮೌಲ್ಯ ಹೆಚ್ಚುತ್ತದೆ ಇನ್ನು ಮುಂದಾದರೂ ಸಹ ಸರ್ಕಾರ ಡಾ.ಶಿವಕುಮಾರ್ ಮಹಾಸ್ವಾಮೀಜಿ ಅವರಿಗೆ ಭಾರತರತ್ನ ನೀಡಿ ಗೌರವಿಸಲಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ವತಿಯಿಂದ ಭಕ್ತಾದಿಗಳಿಗೆ ದಾಸೋಹ ಹುಣ್ಣಿಮೆ ಅಂಗವಾಗಿ ಅನ್ನದಾಸೋಹ ನಡೆಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಕೆ.ವಿದ್ಯಾ ಮಂಜುನಾಥ್ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಸಿದ್ಧಗಂಗಾ ಶ್ರೀಸೇವಾ ಸಮಿತಿ ಅಧ್ಯಕ್ಷ ಎಂ.ಆರ್. ಮಂಜುನಾಥ್, ಲಿಂಗಾಯತ ಮಹಾಸಭಾ ಅಧ್ಯಕ್ಷ ಮಂಜುನಾಥ್ ಬೆಟ್ಟಹಳ್ಳಿ ಶ್ರೀಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆಲಕೆರೆ ಮಹೇಶ್ ಲಿಂಗಾಯತ ಸಮುದಾಯದ ಮುಖಂಡ ಅಮೃತ ಶಂಕರ್ ನಾಗಮಂಗಲ ವೀರ ಮಹಾಸಭಾಧ್ಯಕ್ಷ ಕಲ್ಲಿನಾಥಪುರ ಪರಮೇಶ್, ಅನುಪಮಾ. ಮಹದೇವ್. ಗುತ್ತಿಗೆದಾರ ಗಿರೀಶ್ ಭಾಗವಹಿಸಿದ್ದರು.