ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಶಿವಶರಣ, ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ಜೀವಿತದ ಕೊನೆಯವರೆಗೆ ಜನೋಪಯೋಗಿ ಕೆಲಸಗಳಲ್ಲಿ ತೊಡಗುವ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ದುಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಸಾಹಿತ್ಯ ಪರಿಷತ್ , ತುಮಕೂರು ಜಿಲ್ಲಾ ಭೋವಿ ಸಮಾಜ, ಭಾರತೀಯ ವಡ್ಡರ ಸಂಘದ ವತಿಯಿಂದ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಂದು ಗ್ರಾಮದ ಅಭಿವೃದ್ಧಿಗೆ ಬೇಕಾದ ಕೆರೆ, ಕಟ್ಟೆ, ದೇವಾಲಯ, ಮನೆ ಇನ್ನಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಮೂಲಕ ಜನರ ನೆಮ್ಮದಿಯ ಬದುಕಿಗೆ ಆಸರೆಯಾಗಿ ನಿಂತವರು ಸಿದ್ಧರಾಮರು, ಸೊನ್ನಲಿಗಿಯಲ್ಲಿ ಹುಟ್ಟಿದ ಸಿದ್ಧರಾಮೇಶ್ವರರು ಮಹಾರಾಷ್ಟ್ರ, ಶ್ರೀ ಶೈಲ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಂಚರಿಸಿ, ಹಲವಾರು ಜನೋಪಯೋಗಿ ಕಾರ್ಯ ಮಾಡಿದವರು. ಅವರು ನಿರ್ಮಿಸಿದ ದೇವಾಲಯಗಳು ಧಾರ್ಮಿಕ ಕಾರ್ಯಗಳಿಗೆ ಸಿಮೀತವಾಗದೆ, ಅಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿತ್ತು, ಅನಾಥರಿಗೆ, ನಿರ್ಗತಿಕರಿಗೆ, ಪ್ರವಾಸಿಗರಿಗೆ ಆಶ್ರಯ ತಾಣವಾಗಿ ದೇವಾಲಯಗಳು ಬಳಕೆಯಾಗುತ್ತಿದ್ದವು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಇಂದು ಲೋಕೋಪಯೋಗಿ ಇಲಾಖೆ ಮಾಡುತ್ತಿರುವ ಕೆಲಸವನ್ನು ಅಂದೇ ಸಿದ್ಧರಾಮೇಶ್ವರರು ಮಾಡಿದ್ದರು ಎಂದು ನುಡಿದರು.ಲೋಕೋಪಯೋಗಿ ಕೆಲಸಗಳಲ್ಲಿ ತೊಡಗಿದ್ದ ಶಿವಯೋಗಿ ಸಿದ್ಧರಾಮೇಶ್ವರರು, ಅಲ್ಲಮ ಪ್ರಭುಗಳ ಭೇಟಿಯ ನಂತರ , ಅವರ ಅಣತಿಯಂತೆ ಲೋಕೋಪಯೋಗಿ ಕೆಲಸಗಳ ಜೊತೆಗೆ ಆಧ್ಯಾತ್ಮದ ಕಡೆಗೂ ತಮ್ಮನ್ನು ತೊಡಗಿಸಿಕೊಂಡರು. ಎರಡರಲ್ಲಿಯೂ ಸಿದ್ಧಿ ಪಡೆದು ಪವಾಡ ಪುರುಷರಾದರು. ಇಂದು ನಾವೂ ಕೂಡ ಧಾರ್ಮಿಕ, ಸಾಮಾಜಿಕ ಕಾರ್ಯಗಳ ಮೂಲಕ ಜನಜೀವನ ಹಸನುಗೊಳಿಸುವುದೇ ಸಿದ್ಧರಾಮೇಶ್ವರರಿಗೆ ನೀಡುವ ಗೌರವವಾಗಿದೆ ಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರು ಹಾಗೂ ಭೋವಿ ಸಮುದಾಯದ ಮುಖಂಡರಾದ ಮಂಜುನಾಥ್ ಮಾತನಾಡಿ, ಈ ನಾಡು ಕಂಡ ಸಮಾಜ ಸುಧಾರಕರಲ್ಲಿ ಶ್ರೀಶಿವಯೋಗಿ ಸಿದ್ಧರಾಮೇಶ್ವರರೂ ಒಬ್ಬರು. ಅವರ ನಡೆ ಕೇವಲ ಉಪದೇಶಕ್ಕೆ ಸಿಮೀತವಾಗದೆ, ಸ್ವತಃ ಕೆರೆ, ಕಟ್ಟೆ, ಗೋಶಾಲೆ, ದೇವಾಲಯಗಳು, ಮನೆಗಳನ್ನು ನಿರ್ಮಿಸುವ ಮೂಲಕ ಶರಣ ಪರಂಪರೆಯಲ್ಲಿಯೇ ಅಗ್ರಗಣ್ಯರೆನಿಸಿಕೊಂಡಿದ್ದಾರೆ ಎಂದರು.ಕಪಿಲಸಿದ್ದ ಮಲ್ಲಿಕಾರ್ಜುನ ಎಂಬ ಹೆಸರಿನಲ್ಲಿ ಅವರ ಅನೇಕ ವಚನಗಳು ನಮಗೆ ದೊರೆತಿವೆ. ಅವರು ನಡೆದ ದಾರಿಯಲ್ಲಿ, ಅವರ ಆಶಯಗಳ ಹೊತ್ತು ನಡೆಯುವುದೇ ನಿಜವಾದ ಸಿದ್ಧರಾಮರ ಜಯಂತಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಸಮುದಾಯದ ನಡುವೆ ಒಗ್ಗಟ್ಟು ಕಡಿಮೆಯಾಗಿದೆ. ಅಲ್ಲದೆ ಜಿಲ್ಲಾಡಳಿತ ಕೂಡ ಸರಿಯಾದ ಮಾಹಿತಿ ನೀಡದ ಕಾರಣ, ಜಯಂತಿ ಆಚರಣೆಗೆ ಬರುವ ಸಮುದಾಯದವರ ಸಂಖ್ಯೆ ಕಡಿಮೆಯಾಗಿದೆ. ಮುಂದೆ ಹೀಗಾಗದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಚ್ಚರಿಕೆ ವಹಿಸಬೇಕು. ಸಮುದಾಯದ ಎಲ್ಲರನ್ನು ಒಳಗೊಂಡು ಕಾರ್ಯಕ್ರಮ ಆಯೋಜಿಸಬೇಕೆಂದು ಸಲಹೆ ನೀಡಿದರು.ಭಾರತೀಯ ವಡ್ಡರ ಸಂಘನ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಜಿಲ್ಲೆಯಲ್ಲಿ ಭೋವಿ ಸಮುದಾಯ ಸಾಕಷ್ಟು ಸಂಖ್ಯೆಯಲ್ಲಿ ಇದೆ. ಜಿಲ್ಲಾಡಳಿತ ಮಹನೀಯರ ಜಯಂತಿ ವೇಳೆ ಕನಿಷ್ಠ 15 ದಿನ ಮುಂಚಿತವಾಗಿ ಪೂರ್ವಭಾವಿ ಸಭೆ ಕರೆದು ಮಾತನಾಡಿ, ಅದ್ಧೂರಿ ಮತ್ತು ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ಸಹಕಾರ ನೀಡಬೇಕು. ದಾಖಲೆಗೊಸ್ಕರ ಕಾರ್ಯಕ್ರಮ ಬೇಡ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮುದಾಯದೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಸಮುದಾಯದ ಮುಖಂಡರಾದ ಕೆ.ಎಂ.ಕಾಶಿನಾಥ್ ಮಾತನಾಡಿದರು. ವೇದಿಕೆಯಲ್ಲಿ ಭೋವಿ ಸಮುದಾಯದ ಮುಖಂಡರಾದ ಎನ್.ವೈ.ವೆಂಕಟೇಶ್,ಚಿಕ್ಕ ಉಲುಗಯ್ಯ, ವೆಂಕಟೇಶ್.ಎಂ,ಗಿರಿಯಪ್ಪ,ಪಿ.ಜಿ.ವೆಂಕಟಸ್ವಾಮಿ, ಕೃಷ್ಣಮೂರ್ತಿ, ಮಾಜಿ ಕೌನ್ಸಿಲರ್ ಟಿ.ವಿ.ವಿಶ್ವನಾಥ್, ರಮೇಶ್.ಎಚ್.ವಿ, ಭೂತೇಶ್, ರಮೇಶ್.ಇ, ಜಿ.ವಿ.ಗಂಗಣ್ಣ, ವೆಂಕಟೇಶ್.ಟಿ.ಜಿ, ಅಂಜನಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.